ರಾಷ್ಟ್ರೀಕರಣಕ್ಕೆ ಶ್ರಮಿಸಿದವರನ್ನು ಬಿಜೆಪಿ ದೇಶದ್ರೋಹಿಗಳು ಎಂಬಂತೆ ಬಿಂಬಿಸುತ್ತಿದೆ: ಯು.ಟಿ.ಖಾದರ್
ಬಳ್ಳಾರಿ, ಜು.9: ಖಾಸಗೀಕರಣ ಮಾಡಿದವರು ದೇಶಪ್ರೇಮಿಗಳು, ರಾಷ್ಟ್ರೀಕರಣ ಮಾಡಿದವರು ದೇಶದ್ರೋಹಿಗಳು ಎಂಬಂತೆ ರಾಜ್ಯ ಬಿಜೆಪಿ ಸರಕಾರ ಬಿಂಬಿಸುತ್ತಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಕಿಡಿಕಾಡಿದ್ದಾರೆ.
ಶುಕ್ರವಾರ ಹರಪನಹಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನರಿಗೆ ಮೋಸ ಮಾಡುತ್ತಿದೆ. ಕರುಣೆ, ಮಾನವೀಯತೆ ಗೊತ್ತಿಲ್ಲದ ಬಿಜೆಪಿಯ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾದಿದ್ದಾರೆ ಎಂದರು.
ಕೋವಿಡ್‍ನಿಂದ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಅವರಿಗೆ ದೃಢೀಕರಣ ಪತ್ರ ಕೊಡದ ಸರಕಾರ ಪರಿಹಾರ ಕೊಡುವುದು ದೂರದ ಮಾತು. ಕೋವಿಡ್ ನಿಯಂತ್ರಣದಲ್ಲಿ ವೆಂಟಿಲೇಟರ್‍ಗೆ ಒಬ್ಬ ಮಂತ್ರಿ ಬೆಡ್‍ಗೆ ಒಬ್ಬ ಆಕ್ಸಿಜನ್ ಮತ್ತು ಔಷಧ ನಿರ್ವಹಣೆಗೆ ಒಬ್ಬರಂತೆ ಮಂತ್ರಿ ಮಾಡಲಾಗಿದೆ. ಅನುದಾನದ ಬಿಲ್‍ಗೆ ಯಾರು ಸಹಿ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ಹೈ ಇದೆ, ಕಮಾಂಡ್ ಇಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ದುರಾಡಳಿತವನ್ನು ಜನರೆದುರು ತಿಳಿಸಬೇಕು. ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಖಾದರ್ ಹೇಳಿದರು.
ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಅನಿಲ ದರ ಗಗನಕ್ಕೇರಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಿಜೆಪಿ ಸರಕಾರದಿಂದ ಜನ ಸಾಮಾನ್ಯರ ಚರ್ಮ ಸುಲಿಯುವುದೊಂದೇ ಬಾಕಿ ಉಳಿದಿದೆ. ಬಲವಂತದ ತೆರಿಗೆ ಹೇರಲಾಗುತ್ತಿದೆ. ಕೋವಿಡ್ ನಿಯಂತ್ರಣ ಸಂದರ್ಭದಲ್ಲಿ ವೆಂಟಿಲೇಟರ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ ಸಿರಾಜ್ ಶೇಖ್, ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಸೇರಿ ಉಪಸ್ಥಿತರಿದ್ದರು.







