ಕೋಡಿ ಗ್ರಾಪಂನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಅಧ್ಯಕ್ಷ, ಪಿಡಿಓ ಸ್ಪಷ್ಟನೆ

ಕೋಟ ಜು 9: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮಪಂಚಾಯತ್‌ನಲ್ಲಿ ಕಳೆದ ಮೂರು ವರ್ಷದಲ್ಲಿ 25 ಲಕ್ಷ ರೂ ಅವ್ಯವಹಾರ ನಡೆದಿದೆ ಎಂದು ಕೋಡಿ ಹಿತಾರಕ್ಷಣ ವೇದಿಕೆ ಅಧ್ಯಕ್ಷ ಉದಯ ಕುಂದರ್ ಉಡುಪಿಯಲ್ಲಿ ಈಚೆಗೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಹಾಗೂ ಪಿಡಿಒ ಬೆನ್ನಿ ಕ್ವಾಡ್ರಸ್ ಹೇಳಿದ್ದಾರೆ.
ಶುಕ್ರವಾರ ಕೋಡಿ ಗ್ರಾಪಂನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದರು. ಅಧ್ಯಕ್ಷ ಪ್ರಭಾಕರ್ ಮೆಂಡನ್ ಮಾತನಾಡಿ, ತಾನು ಕಳೆದ ಎ. 26ರಂದು ಕೋಡಿ ಗ್ರಾಪಂ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಸ್ಥಳೀಯರಾದ ಉದಯ ಕುಂದರ್ ಎನ್ನುವವರು ಉದ್ದೇಶ ಪೂರ್ವಕವಾಗಿ ನನ್ನ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪಗಳ ಮೂಲಕ ನನ್ನ ಮಾನಹಾನಿ ಮಾಡಿ ನಾನು ರಾಜೀನಾಮೆ ನೀಡಬೇಕು ಎಂದು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದರು.
ಉದಯ ಕುಂದರ್ ಈ ರೀತಿ ವರ್ತಿಸಲು ಕಾರಣ ಕಳೆದ ಬಾರಿ ನೆಡೆದ ಚುನಾವಣೆಯಲ್ಲಿ ನನ್ನ ಎದುರಾಳಿಯಾಗಿ ನಿಂತು ಸೋತಿರುವುದಾಗಿದೆ. ಈ ಒಂದು ಹತಾಶಭಾವದಿಂದ ಇಲ್ಲ ಸಲ್ಲದ ಆರೋಪ ಮಾಡಿ ನನ್ನ ಮೇಲೆ ಜನರಿಗೆ ತಪ್ಪು ಭಾವನೆ ಮೂಡಲು ತಂತ್ರಗಾರಿಕೆ ನಡೆಸಿದ್ದಾರೆ ಎಂದರು.
ನಾನು ಈ ಹಿಂದೆ 3 ವರ್ಷ ಗ್ರಾಪಂ ಸದಸ್ಯನಾಗಿರುವಾಗ ಗ್ರಾಮಸ್ಥರಾಗಲಿ, ಈ ಉದಯ ಕುಂದರ್ ಆಗಲಿ ಯಾವುದೇ ಆಪಾದನೆಯನ್ನು ಮಾಡಿಲ್ಲ. ಆದರೆ ನಾನು ಈಗ ಗ್ರಾಪಂ ಅಧ್ಯಕ್ಷನಾದ ದಿನದಿಂದ ಒಂದಲ್ಲಾ ಒಂದು ಆರೋಪ ಮಾಡಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇದು ಉದ್ದೇಶ ಪೂರ್ವಕ ವಾದ ರಾಜಕೀಯ ಷಡ್ಯಂತ್ರ ಎಂದರಲ್ಲದೇ ನನ್ನ ರಾಜೀನಾಮೆ ಕೇಳಲು ಉದಯ ಕುಂದರ್‌ಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು.
ಪಿಡಿಒ ಬೆನ್ನಿ ಕ್ವಾಡ್ರಸ್ ಮಾತನಾಡಿ, ಕೋಡಿತಲೆ ಪ್ರದೇಶದಲ್ಲಿ 3.17 ಲಕ್ಷ ರೂ. ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಗೆ ಬಿಲ್ ಮಂಜೂರು ಮಾಡಿ ರುವುದಾಗಿ ಆರೋಪಿಸಲಾಗಿದೆ. ಆದರೆ ಇಲ್ಲಿ ಸ್ಮಶಾನ ಭೂಮಿಯ ಸಮತಟ್ಟು ಗೊಳಿಸುವಿಕೆ ಹಾಗೂ ರಸ್ತೆ ರಚನೆ ಸಲುವಾಗಿ ಕೇವಲ 1.20ಲಕ್ಷ ರೂ ವ್ಯಯಿಸಲಾಗಿದೆ. ಇವೆರಡು ಪ್ರತ್ಯೇ ಕಾಮಗಾರಿಯಾದ್ದರಿಂದ ಎರಡು ಪ್ರತ್ಯೇಕ ಬಿಲ್‌ಗಳನ್ನು ದಾಖಲೆ ಪ್ರಕಾರ ಮಂಜೂರು ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಇನ್ನು ಎಸ್‌ಎಲ್‌ಆರ್‌ಎಂ ಘಟಕಕ್ಕೆ 16ಲಕ್ಷ ರೂ ಬಿಲ್ ಮಂಜೂರು ಮಾಡಿರುವ ಆರೋಪವೂ ಸುಳ್ಳು. ಈ ಘಟಕಕ್ಕೆ 10ಲಕ್ಷ ರೂ.ವನ್ನು ಕೆಆರ್‌ಐಡಿಬಿಎಲ್ ಮೂಲಕ ಕಾಮಗಾರಿ ನಡೆಸಲು ಮೀಸಲಿರಿಸಿದ್ದು. ಕಾಮಗಾರಿ ಇನ್ನಷ್ಟೇ ನಡೆಸಬೇಕಿದೆ. ಹೀಗಾಗಿ ಬಿಲ್ ಪಾವತಿಯಾಗಿಲ್ಲ. ಉಳಿದ 5 ಲಕ್ಷ ರೂ.ನಲ್ಲಿ ವಾಹನ ಖರೀದಿ ಮಾಡಲಾಗಿದೆ ಎಂದರು.
ಗ್ರಾಪಂ ಆಡಳಿತ ವ್ಯವಸ್ಥೆಯನ್ನು ತೇಜೋವಧೆ ಮಾಡುವ ಸಲುವಾಗಿ ಈ ರೀತಿ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ ಎಂದು ಪಿಡಿಒ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಗೀತಾ ಖಾರ್ವಿ, ಸತೀಶ್ ಕುಂದರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ ಕುಂದರ್, ಮಾಜಿ ಸದಸ್ಯ ಅಣ್ಣಪ್ಪ ಕುಂದರ್, ರಾಘವೇಂದ್ರ ಸುವರ್ಣ ಉಪಸ್ಥಿತರಿದ್ದರು.







