ವಾಕ್ಸಮರ ಬಿಟ್ಟು ಸಿಎಂ ಗಮನ ಸೆಳೆಯಿರಿ: ಸುಮಲತಾ, ಎಚ್ಡಿಕೆಗೆ ಚಲುವರಾಯಸ್ವಾಮಿ ಸಲಹೆ

ಮಂಡ್ಯ, ಜು.9: ಪರಸ್ಪರ ವಾಕ್ಸಮರ ಬಿಟ್ಟು ಅಕ್ರಮ ಗಣಿಗಾರಿಕೆ, ಮನ್ ಮುಲ್ ಹಗರಣ, ಮೈಶುಗರ್ ಆರಂಭ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆಯಬೇಕು ಎಂದು ಸುಮಲತಾ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೂರೂ ಪ್ರಕರಣವನ್ನು ಸಿಬಿಐ ತನಿಖೆ ಮಾಡಿಸಿದರೆ ಜನರಿಗೆ ಅಂತಿಮವಾಗಿ ನ್ಯಾಯ ಸಿಗುತ್ತದೆ. ವಾಗ್ವಾದ ಮಾಡಿಕೊಂಡು ಹೋಗುತ್ತಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.
ನೀರಾವರಿ ಖಾತೆ ತಮ್ಮ ಬಳಿ ಇಟ್ಟುಕೊಂಡಿರುವ ಯಡಿಯೂರಪ್ಪ ಅವರೇ ಕೆಆರ್‍ಎಸ್ ಡ್ಯಾಂ ಸೋರಿಕೆ ಬಗೆಗಿನ ಗೊಂದಲದ ಬಗ್ಗೆ ಆತಂಕದಲ್ಲಿರುವ ಜಿಲ್ಲೆಯ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮೈಶುಗರ್ ಖಾಸಗೀಕರಣ ಮಾಡುತ್ತೇವೆಂದು ಡಿಸಿಎಂ ಅಶ್ವಥನಾರಾಯಣ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರಕಾರವೇ ನಡೆಸುತ್ತದೆಂದು ಹೇಳಿರುವ ಕುಮಾರಸ್ವಾಮಿಯವರೇ ಯಾವುದು ಸತ್ಯವೆಂದು ಸ್ಪಷ್ಟಪಡಿಸಬೇಕು ಎಂದರು.
ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಮೂರು ವರ್ಷಗಳಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ, ಅಭಿವೃದ್ಧಿ ಕೆಲಸ ಕೈಗೊಳ್ಳುವಲ್ಲಿ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ ಎಂದು ಅವರು ಟೀಕಿಸಿದರು.
“ಬೇರೆಯವರು ಮಾತನಾಡಿದರೆ ಹುಷಾರ್ ಎನ್ನುತ್ತಾರೆ. ತಾವು (ಕುಮಾರಸ್ವಾಮಿ) ಬಳಸಿದ ಪದ ಮಾತ್ರ ವಾಡಿಕೆ ಮಾತಂತೆ. ಇದು ಎಂತಹ ಅಸಹ್ಯ! ಇನ್ನಾದರೂ ಇದನ್ನು ಬಿಟ್ಟು ಗಂಭೀರವಾಗಿ ನಡೆದುಕೊಳ್ಳಬೇಕು”.
-ಚಲುವರಾಯಸ್ವಾಮಿ, ಮಾಜಿ ಸಚಿವ.







