ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಜಾಕೊಬ್ ಝುಮಾಗೆ ಜೈಲುಶಿಕ್ಷೆ

photo: twitter/@PresJGZuma
ಜೊಹಾನ್ಸ್ಬರ್ಗ್, ಜು.9: ನ್ಯಾಯಾಂಗ ನಿಂದನೆ ಆರೋಪದಲ್ಲಿ ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಜಾಕೊಬ್ ಝುಮಾಗೆ ಅಲ್ಲಿನ ನ್ಯಾಯಾಲಯ ಗುರುವಾರ 15 ತಿಂಗಳ ಜೈಲುಶಿಕ್ಷೆ ವಿಧಿಸಿದೆ. ಇದರೊಂದಿಗೆ ಜಾಕೊಬ್ ಝುಮಾ ವರ್ಣಭೇದ ನೀತಿಯ ಯುಗ ಅಂತ್ಯಗೊಂಡ ಬಳಿಕ ಜೈಲು ಸೇರಿದ ಪ್ರಥಮ ಅಧ್ಯಕ್ಷ ಎಂದೆನೆಸಿಕೊಂಡಿದ್ದಾರೆ.
9 ವರ್ಷದ ಅಧಿಕಾರಾವಧಿಯಲ್ಲಿ ಜಾಕೊಬ್ ಝುಮಾ ಭಾರೀ ಬೃಷ್ಟಾಚಾರ ಎಸಗಿದ್ದಾರೆ ಎಂಬ ಆರೋಪವಿದೆ. ಆದರೆ ಇದನ್ನು ನಿರಾಕರಿಸಿದ್ದ ಝುಮಾ, ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆಗೆ ಹಾಜರಾಗಲು ನಿರಾಕರಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಜೂನ್ 29ರಂದು 15 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದರೂ ಬಂಧನಕ್ಕೆ ಒಳಗಾಗಲು ನಿರಾಕರಿಸಿದ್ದ ಝುಮಾ, ತನ್ನ ಬೆಂಬಲಿಗರಿಂದ ಬೃಹತ್ ರ್ಯಾಲಿ ಸಂಘಟಿಸಿ ಸರಕಾರದ ಮೇಲೆ ಒತ್ತಡ ವಿಧಿಸುವ ತಂತ್ರ ಹೂಡಿದ್ದರು. ಈ ಮಧ್ಯೆ, ಬುಧವಾರ ಮಧ್ಯರಾತ್ರಿಯೊಳಗೆ ಶರಣಾಗದಿದ್ದರೆ ಬಂಧಿಸಲಾಗುವುದು ಎಂದು ಪೊಲೀಸರು ಅಂತಿಮ ಎಚ್ಚರಿಕೆ ನೀಡಿದ ಬಳಿಕ, ಗುರುವಾರ ಝುಮಾ ತನ್ನ ತವರೂರು ಕ್ವಝುಲು-ನಟಾಲ್ನ ಜೈಲಿಗೆ ಹೋಗಿ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ದೇಶದ ಕಾನೂನಿಗೆ ದೊರೆತ ಮಹತ್ತರ ಮುನ್ನಡೆ ಇದಾಗಿದೆ ಎಂದು ಭ್ರಷ್ಟಾಚಾರ ನಿಯಂತ್ರಣ ಇಲಾಖೆಯ ಮಾಜಿ ಅಧಿಕಾರಿ ಥುಲಿ ಮಡೋನ್ಸೆಲ ಪ್ರತಿಕ್ರಿಯಿಸಿದ್ದಾರೆ. ಆದರೆ ಮಾನವೀಯತೆಯ ದೃಷ್ಟಿಯಿಂದ ನೋಡುವುದಾದರೆ, 70 ವರ್ಷದ ಮಾಜಿ ಅಧ್ಯಕ್ಷ ಝುಮಾ, ತಾನು ಹೊಣೆ ಹೊರಲು ನಿರಾಕರಿಸಿದ ಮಾತ್ರಕ್ಕೆ ಜೈಲು ಸೇರುವಂತಾಗಿರುವುದು ವಿಷಾದದ ಸಂಗತಿಯಾಗಿದೆ ಎಂದವರು ಹೇಳಿದ್ದಾರೆ.





