ಮೂಡಿಗೆರೆ: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ; ನ್ಯಾಯಾಂಗ ತನಿಖೆಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ

ಮೂಡಿಗೆರೆ, ಜು.9: ದಲಿತ ಯುವಕನನ್ನು ವಿನಾಕಾರಣ ಪೋಲೀಸ್ ಠಾಣೆಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದಲ್ಲದೇ ಮೂತ್ರಕುಡಿಸಿ ವಿಕೃತಿ ಮೆರೆದಿರುವ ಅಮಾನವೀಯ ಪ್ರಕರಣದ ಆರೋಪಿಯಾಗಿರುವ ಗೋಣಿಬೀಡು ಠಾಣೆಯ ಪಿಎಸ್ಸೈ ಅರ್ಜುನ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಮಹಾಸಂಚಾಲಕ ಎನ್.ರಾಜಣ್ಣ ಸರಕಾರವನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ದಲಿತ ಯುವಕನಿಗೆ ಮೂತ್ರಕುಡಿಸಿದ ಪ್ರಕರಣವನ್ನು ಖಂಡಿಸಿ ಹಾಗೂ ಗೋಣಿಬೀಡು ಪಿಎಸ್ಸೈ ಅರ್ಜುನ್ ಬಂಧನಕ್ಕೆ ಆಗ್ರಹಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ರಕ್ಷಣೆ ಸಿಗಬೇಕಿತ್ತು. ಆದರೆ ಇಲ್ಲಿ ದಲಿತರಿಗೆ ರಕ್ಷಣೆ ಮರೀಚಿಕೆಯಾಗಿದೆ. ದೇಶವೇ ತಲೆತಗ್ಗಿಸಬೇಕಾದ ಗಂಭೀರ ಪ್ರಕರಣ ನಡೆದರೂ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿ ಪಿಎಸ್ಸೈ ಅರ್ಜುನ್ ಅವರನ್ನು ಅಮಾನತ್ತುಗೊಳಿಸಿ ತನ್ನ ಕೆಲಸ ಮುಗಿಯಿತೆಂದು ಕೈತೊಳೆದು ಕುಳಿತಿದೆ. ದಲಿತರ ಮೇಲಿನ ದೌರ್ಜನ್ಯ ಇದು ಮೊದಲು ಅಥವಾ ಕೊನೆಯಲ್ಲ. ಆರೋಪಿ ಪಿಎಸ್ಸೈ ಅಧಿಕಾರಿಯಾಗಿದ್ದರೂ ಗೂಂಡಾ ಪ್ರವೃತ್ತಿಯಿಂದ ವರ್ತಿಸಿ ದಲಿತರ ಮೆಲೆಯೇ ಸವಾರಿ ಮಾಡುವ ಚಾಳಿಹೊಂದಿದ್ದಾರೆ. ಆತನನ್ನು ಬಂಧಿಸಲು ಸರಕಾರ ಕೂಡಲೇ ಆದೇಶನೀಡಬೇಕು. ಪ್ರಕರಣ ನ್ಯಾಯಾಂಗ ತನಿಖೆಯಾದರೆ ಸಂಪೂರ್ಣ ಸತ್ಯ ಹೊರಬರುತ್ತದೆ. ಸಿಐಡಿ ತನಿಖೆಯಲ್ಲಿ ಇದುವರೆಗೂ ಯಾರಿಗೂ ನ್ಯಾಯ ಸಿಕ್ಕಿಲ್ಲವೆಂದು ತಿಳಿಸಿದರು.
ಸಿಪಿಐ ಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಭೂಮಾಕರು, ಮರಳು ದಂಧೆಕೋರರು ಮತ್ತು ದರೋಡೆಕೋರರೊಂದಿಗೆ ಕೈಜೋಡಿಸುತ್ತಿದ್ದ ಪಿಎಸ್ಸೈ ಅರ್ಜುನ್ ವಸತಿ ಗೃಹವಿದ್ದರೂ ಅದರಲ್ಲಿ ವಾಸ್ತವ್ಯ ಹೂಡದೆ ಗೋಣಿಬೀಡು ಸಮೀಪದ ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದವರು. ಅಲ್ಲಿ ಕಂಠಪೂರ್ತಿ ಕುಡಿದು ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಸಿಕ್ಕ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಆತನ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರು ಹಲವುಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಉದ್ದೇಶ ಪೂರ್ವಕವಾಗಿ ದಲಿತ ಯುವಕ ಪುನೀತ್‍ನನ್ನು ವಿನಾಕಾರಣ ಠಾಣೆಗೆ ಕರೆದೊಯ್ದು ಗೂಂಡಾಗಿರಿ ನಡೆಸಿ ಮೇಲ್ಜಾತಿಯ ಯುವಕನಿಂದ ದಲಿತ ಯುವಕನ ಬಾಯಿಗೆ ಮೂತ್ರ ಕುಡಿಸಿದ್ದಾರೆ. ಇಂತಹ ಅಮಾನವೀಯ ಪ್ರಕರಣದ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮವಹಿಸಬೇಕಿತ್ತು. ಆದರೆ ಪಿಎಎಸ್ಸೈ ಮೇಲ್ಜಾತಿಯ ಪ್ರಭಾವಿ ಸಮುದಾಯಕ್ಕೆ ಸೇರಿರುವುದು ಹಾಗೂ ರಾಜಕಾರಣಿಗಳ ಸಂಬಂಧಿಯಾಗಿರುವುದರಿಂದ ಆತನ ವಿರುದ್ಧ ಕಾನೂನು ಕ್ರಮವಹಿಸಿಲ್ಲ. ಪ್ರಕರಣ ಮುಚ್ಚಿಹಾಕಲು ಸಿಐಡಿ ತನಿಖೆ ಮಾಡಲಾಗುತ್ತಿದ್ದು, ಸತ್ಯ ಹೊರ ಬರಲು ನ್ಯಾಯಾಂಗ ತನಿಖೆಯಾಗಬೇಕೆಂದರು.
ಪ್ರತಿಭಟನೆಗೂ ಮುನ್ನ ನೂರಾರು ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣದ ಲಯನ್ಸ್ ವೃತ್ತದಲ್ಲಿ ಸಭೆ ನಡೆಸಿದರು. ಈ ವೇಳೆ ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಆವರಣಕ್ಕೆ ತೆರಳಿ ತಹಶೀಲ್ದಾರ್ ನಾಗರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಮಯ್ಯ, ಸಂತ್ರಸ್ತ ಯುವಕ ಪುನೀತ್, ವಿವಿಧ ಸಂಘಟನೆಗಳ ಮುಂಖಡರಾದ ಗೌಸ್ ಮೊಹಿದ್ದೀನ್, ಪತ್ರಕರ್ತ ನಾಗರಾಜ್ ಹೆತ್ತೂರು, ಬಿ.ಎಂ.ರಘು, ಉಡುಪಿಯ ಲೋಕೇಶ್, ಡಾ.ಶಿಲ್ಪಾ, ಕೆ.ಪ್ರಕಾಶ್, ದೇಜಪ್ಪ, ವಿ.ಕೃಷ್ಣ ಬಂಗೇರಾ, ಎಂ.ಸಿ ಹೂವಪ್ಪ, ಅಲ್ತಾಫ್ ಬಿಳಗುಳ ಮತ್ತಿತರರಿದ್ದರು.
.jpg)





