ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣ: ಪಶ್ಚಿಮ ಬಂಗಾಳದ 7 ಐಪಿಎಸ್ ಅಧಿಕಾರಿಗಳಿಗೆ ಈ.ಡಿ. ಸಮನ್ಸ್

ಹೊಸದಿಲ್ಲಿ, ಜು. 9: ಕಲ್ಲಿದ್ದಲು ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದಲ್ಲಿ ನಿಯೋಜಿಸಲಾಗಿದ್ದ 7 ಮಂದಿ ಐಪಿಎಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಈ.ಡಿ.) ಸಮನ್ಸ್ ಜಾರಿ ಮಾಡಿದೆ.
ಐಪಿಎಸ್ ಅಧಿಕಾರಿಗಳಾದ ಗ್ಯಾನ್ವಂತ್ ಸಿಂಗ್ (ಎಡಿಜಿ, ಸಿಐಡಿ), ಕೋಟೇಶ್ವರ ರಾವ್ (ಎಸ್.ಪಿ. ಪಶ್ಚಿಮಬಂಗಾಳ), ಎಸ್. ಸೆಲ್ವಮುರುಗನ್ (ಎಸ್.ಪಿ. ಪುರುಲಿಯಾ), ಶ್ಯಾಮ್ ಸಿಂಗ್ (ಡಿಐಜಿ, ಮಿಡ್ನಾಪುರ ವಲಯ), ರಾಜೀವ್ ಮಿಶ್ರಾ (ಎಡಿಜಿ ಹಾಗೂ ಐಜಿಪಿ, ಯೋಜನೆ), ಸುಖೇಶ್ ಕುಮಾರ್ ಜೈನ್ (ಸೈಬರ್, ಸಿಐಡಿ) ಹಾಗೂ ತಥಾಗಥ ಬಸು (ಎಸ್.ಪಿ. ಪಶ್ಚಿಮಬಂಗಾಳ) ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಜುಲೈ ಹಾಗೂ ಆಗಸ್ಟ್ ವಿಭಿನ್ನ ದಿನಾಂಕಗಳಲ್ಲಿ ನಡೆಯಲಿರುವ ತನಿಖೆಯಲ್ಲಿ ಭಾಗಿಯಾಗುವಂತೆ ಜಾರಿ ನಿರ್ದೇಶನಾಲಯ ಐಪಿಎಸ್ ಅಧಿಕಾರಿಗಳಿಗೆ ಸೂಚಿಸಿದೆ. ಈ ಐಪಿಎಸ್ ಅಧಿಕಾರಿಗಳ ವಿಚಾರಣೆ ಜುಲೈ 26ರಿಂದ ಆರಂಭವಾಗಲಿದೆ ಹಾಗೂ ಆಗಸ್ಟ್ 6ರ ವರೆಗೆ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಾಗಾಟ ನಡೆಯುತ್ತಿದ್ದ ಪ್ರದೇಶದಲ್ಲಿ ಸಮನ್ಸ್ ನೀಡಲಾದ ಅಧಿಕಾರಿಗಳಲ್ಲಿ ಕೆಲವರು ನಿಯೋಜಿತರಾಗಿದ್ದರು ಎಂದು ಮೂಲಗಳು ತಿಳಿಸಿವೆ.







