ದ.ಕ. ಜಿಲ್ಲೆ : ಕೋವಿಡ್ ಗೆ 9 ಬಲಿ; 209 ಮಂದಿಗೆ ಕೊರೋನ ಪಾಸಿಟಿವ್

ಮಂಗಳೂರು, ಜು.9: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಸಾವಿನ ಸಂಖ್ಯೆ ಮತ್ತು ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಯಾದರೆ, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ.
ಶುಕ್ರವಾರ ಕೋವಿಡ್‌ಗೆ 9 ಮಂದಿ ಬಲಿಯಾಗಿದ್ದರೆ, 209 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.2.59ರಿಂದ 2.71ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,299ಕ್ಕೇರಿದ್ದರೆ, ಕೊರೋನ ಸೋಂಕಿಗೊಳಗಾದವರ ಸಂಖ್ಯೆ 95,011ಕ್ಕೇರಿದೆ. ಅಲ್ಲದೆ 374 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖ ರಾದವರ ಸಂಖ್ಯೆ 91,306ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,406 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 11,15,323 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 10,20,312 ಮಂದಿಯ ವರದಿ ನೆಗೆಟಿವ್ ಬಂದಿದೆ.
ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 79,531 ಮಂದಿಯಿಂದ 96,99,867 ರೂ. ದಂಡ ವಸೂಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್‌ನ ಒಂದು ಪ್ರಕರಣ ಪತ್ತೆ
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬ್ಲ್ಯಾಕ್ ಫಂಗಸ್ 1 ಹೊಸ ಪ್ರಕರಣ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಈ ವ್ಯಕ್ತಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 32ಕ್ಕೇರಿದೆ. ಅದರಲ್ಲಿ 7 ದ.ಕ. ಜಿಲ್ಲೆಗೆ ಮತ್ತು 25 ಮಂದಿ ಹೊರ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಈವರೆಗೆ 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ ದ.ಕ.ಜಿಲ್ಲೆಯ 5 ಮತ್ತು ಹೊರಜಿಲ್ಲೆಯ 16 ಮಂದಿಯ ಸಹಿತ 21 ಮಂದಿಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.







