ಬಾಲಕಿಗೆ ಲೈಂಗಿಕ ದೌರ್ಜನ್ಯ; ಕಾರ್ಕಳದ ಇಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಸತೀಶ್
ಉಡುಪಿ, ಜು.9: ತಮಿಳುನಾಡು ಮೂಲದ 16 ವರ್ಷ ಪ್ರಾಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
16 ವರ್ಷದ ಈಕೆಗೆ ತಂದೆ ಇಲ್ಲದೆ ಇರುವುದರಿಂದ ತಾಯಿ ಮತ್ತು ಮಲತಂದೆಯೊಂದಿಗೆ ವಾಸವಿದ್ದಳು. ಮಲತಂದೆಯ ಕಿರುಕುಳ ತಡೆಯ ಲಾರದೆ ಸ್ನೇಹಿತನಿಗೆ ಕರೆಮಾಡಿ ಆತನ ಕಾರ್ಕಳದ ಮನೆಯಲ್ಲಿ 2 ತಿಂಗಳುಗಳಿಂದ ಆತನೊಂದಿಗೆ ಇದ್ದಳು. ಆತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಾರ್ವಜನಿಕರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಲಾಗಿತ್ತು.
ತಕ್ಷಣ ಆಕೆ ಇರುವ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳಾದ ಸತೀಶ್ (24) ಮತ್ತು ವಿಜಯ (35) ಎನ್ನುವವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ದೂರು ನೀಡಿದ್ದಾರೆ.
ಕಾರ್ಕಳ ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಧು ಬಿ. ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಶ್ ಪಿ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೊಂದ ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ ಮತ್ತು ಔಟ್ರೀಚ್ ಪ್ರತಿನಿಧಿ ಸುನಂದಾ ಸಮಾಲೋಚನೆಗೊಳಪಡಿಸಿದರು. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.







