ಮೈಶುಗರ್ ಸಕ್ಕರೆ ಕಾರ್ಖಾನೆ ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಿ: ಮುಖ್ಯಮಂತ್ರಿ ಗೆ ಡಿ.ಕೆ.ಶಿವಕುಮಾರ್ ಪತ್ರ

ಬೆಂಗಳೂರು, ಜು. 9: `ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆ ನೀಡುವುದನ್ನು ತಡೆಹಿಡಿದು, ಅದನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
`ಮಂಡ್ಯ ಜಿಲ್ಲೆಯ ಮಾಜಿ ಶಾಸಕರು, ರೈತ ಮುಖಂಡರು ಈ ವಿಚಾರವಾಗಿ ತಮಗೆ ಮನವಿ ಪತ್ರ ಬರೆದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗೆ ಶುಕ್ರವಾರ ಬರೆದಿದ್ದು, `ಸರಕಾರ ಈಗಾಗಲೇ ಗುತ್ತಿಗೆ ನೀಡಿರುವ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಸರಿಯಾಗಿ ಕಬ್ಬು ಅರೆಯುತ್ತಿಲ್ಲ. ಜತೆಗೆ ರೈತರ ಹಿತವನ್ನು ಕಾಪಾಡುತ್ತಿಲ್ಲ. ಈ ವಿಚಾರವಾಗಿ ತಾವುಗಳು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತಾ, ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಿರಿ' ಎಂದು ಜ್ಞಾಪಿಸಿದ್ದಾರೆ.
`ಹೀಗಾಗಿ ಸಿಎಂ ಯಡಿಯೂರಪ್ಪನವರು ತಮ್ಮ ಮಾತಿಗೆ ಬದ್ಧರಾಗಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು' ಎಂದು ಶಿವಕುಮಾರ್ ಪತ್ರದಲ್ಲಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.





