ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಚಿವರೇ ತಿಳಿದುಕೊಂಡಿಲ್ಲ: ಎಚ್.ವಿಶ್ವನಾಥ್ ಆಕ್ರೋಶ
"ಪ್ರತಾಪ್ ಸಿಂಹ ಜೆಡಿಎಸ್ ಪ್ರಾಯೋಜಿತ ಸಂಸದ"

ಮೈಸೂರು,ಜು.9: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಚಿವರುಗಳೇ ತಿಳಿದುಕೊಂಡಿಲ್ಲ, ಇನ್ನು ತರಾತುರಿಯಲ್ಲಿ ರಾಜ್ಯದಲ್ಲಿ ಜಾರಿ ಮಾಡುವುದು ಅರ್ಥವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ವಿಶ್ವನಾಥ್, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸರಿಯಲ್ಲ, ರಾಜ್ಯದಲ್ಲಿರುವ ಸಚಿವರುಗಳೇ ಇದರ ಬಗ್ಗೆ ತಿಳಿದುಕೊಂಡಿಲ್ಲ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿಧಾನಪರಿಷತ್ ನಲ್ಲಿ ಇದರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಆಗ ನಾನೇ ಇದನ್ನು ವಿರೋಧಿಸಿದ್ದೆ. ಮೊದಲು ತಿಳಿದುಕೊಂಡು ನಂತರ ಮಾತನಾಡುವಂತೆ ಹೇಳಿದ್ದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಏಕಾ ಏಕಿ ಜಾರಿ ಮಾಡಲಾಗಿದೆ. ಇದರ ಬಗ್ಗೆ ಸಮಗ್ರ ಚರ್ಚೆ ಆಗಬೇಕಿತ್ತು ಎಂದು ವಿಶ್ವನಾಥ್ ಅಭಿಪ್ರಾಯಿಸಿದರು.
ಇನ್ನು ಸಹಕಾರ ಇಲಾಖೆಯ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವ ಭಾರತ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ಇದರಿಂದ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
"ಪ್ರತಾಪ್ ಸಿಂಹ ಜೆಡಿಎಸ್ ಪ್ರಾಯೋಜಿತ ಸಂಸದ"
ಜೆಡಿಎಸ್ ಪ್ರಾಯೋಜಿತ ಸಂಸದ ಪ್ರತಾಪ್ ಸಿಂಹ, ಹಾಗಾಗಿ ಆತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಮಾತನಾಡುತ್ತಿದ್ದಾನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಸಂಸದ ಪ್ರತಾಪ್ ಸಿಂಹ ಕುಮಾರಸ್ವಾಮಿ ಪರವಾಗಿ ಮಾತನಾಡದೆ ಬೇರೆಯವರೆ ಪರ ಮಾನಾಡಲು ಸಾಧ್ಯವೆ? ಏಕೆಂದರೆ ಆತ ಜೆಡಿಎಸ್ ಪ್ರಾಯೋಜಿತ ಸಂಸದ. ಆತ ಜನರ ವಿಶ್ವಾಸದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ, ಜೆಡಿಎಸ್ ಪಕ್ಷದ ಮತ್ತು ಜಾತಿ ಆಧಾರದ ಮೇಲೆ ಗೆಲುವು ಸಾಧಿಸಿದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಿಶ್ರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಯಾರಿಗೆ ಬೆಂಬಲ ನೀಡಿತು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ನಿಲುವೇನು. ಹಾಗಾಗಿ ಪ್ರತಾಪ್ ಸಿಂಹ ಜೆಡಿಎಸ್ ಪರವಾಗಿಯೇ ಮಾತನಾಡಬೇಕು ಎಂದು ವ್ಯಂಗ್ಯವಾಡಿದರು.





