ಎನ್ಪಿಎಗಳ ಘೋಷಣೆಯ ಮೇಲೆ ಸ್ತಂಭನವನ್ನು ಕೋರಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ನಿರಾಕರಣೆ
ಹೊಸದಿಲ್ಲಿ,ಜು.9: ಸಾಲ ಖಾತೆಗಳನ್ನು ಅನುತ್ಪಾದಕ ಆಸ್ತಿ (ಎನ್ಪಿಎ)ಗಳೆಂದು ಘೋಷಿಸುವುದನ್ನು ಕಡ್ಡಾಯಗೊಳಿಸಿರುವ ತನ್ನ ಈ ಹಿಂದಿನ ತೀರ್ಪಿನ ಸ್ಪಷ್ಟನೆ ಮತ್ತು ಪರಿಷ್ಕರಣೆಯನ್ನು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ಅರ್ಜಿದಾರರಾದ ನ್ಯಾಯವಾದಿ ವಿಶಾಲ ತಿವಾರಿ ಅವರು,ಸಾಲ ಖಾತೆಗಳನ್ನು ಎನ್ಪಿಎಗಳನ್ನಾಗಿ ಘೋಷಿಸುವುದರ ಮೇಲಿನ ತಡೆಯನ್ನು ತೆರವುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯದ ಮಾ.23ರ ಆದೇಶವನ್ನು ಪರಿಷ್ಕರಿಸುವಂತೆ ಕೋರಿದ್ದರು.
ಆ.31ಕ್ಕೆ ಇದ್ದಂತೆ ಎನ್ಪಿಎಗಳೆಂದು ಘೋಷಿಸಿರದ ಸಾಲಗಳನ್ನು ಸಾಲ ಸ್ತಂಭನ ಯೋಜನೆಯ ಅವಧಿಯಲ್ಲಿನ ಕಂತುಗಳ ಮೇಲಿನ ಬಡ್ಡಿ ಮನ್ನಾಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ತಾನು ಪೂರ್ಣಗೊಳಿಸುವವರೆಗೆ ಎನ್ಪಿಎಗಳೆಂದು ಘೋಷಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಸೆಪ್ಟೆಂಬರ್ 2020ರ ಆದೇಶದಲ್ಲಿ ತಿಳಿಸಿತ್ತು. ಕೊರೋನವೈರಸ್ ಬಿಕ್ಕಟ್ಟಿನ ನಡುವೆ ಸಾಲಗಾರರಿಗೆ ನೆಮ್ಮದಿಯನ್ನೊದಗಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ನ್ಯಾಯಾಲಯದ ಮಾ.23ರ ಆದೇಶದ ಬಳಿಕ ಬ್ಯಾಂಕುಗಳು ಸುಸ್ತಿಯಾದ ಪಕ್ಷದಲ್ಲಿ ಪ್ರಮಾಣಿತ ಖಾತೆಗಳ ಮೇಲೆ ಎನ್ಪಿಎ ನಿಯಮಗಳನ್ನು ಹೇರಬಹುದು. ಆದರೆ ಕಾನೂನಿನಂತೆ 90 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಸಾಲ ಮರುಪಾವತಿ ಮಾಡದಿದ್ದರೆ ಮಾತ್ರ ಸಾಲಗಾರನ ಪ್ರಮಾಣಿತ ಖಾತೆಯನ್ನು ಎನ್ಪಿಎ ಎಂದು ಘೋಷಿಸಬಹುದಾಗಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದ ತಿವಾರಿ,ಯಾವುದೇ ಖಾತೆಯನ್ನು ಎನ್ಪಿಎ ಎಂದು ಘೋಷಿಸಲು 90 ದಿನಗಳ ಕಾಲಾವಧಿಯನ್ನು ಸವೋಚ್ಚ ನ್ಯಾಯಾಲಯ ಆದೇಶವನ್ನು ಹೊರಡಿಸಿದ್ದ ಮಾ.23ರಿಂದ ಲೆಕ್ಕ ಹಾಕಲು ನಿರ್ದೇಶ ನೀಡುವಂತೆ ಕೋರಿದ್ದರು.







