ಕೊರೋನ ಸಾಂಕ್ರಾಮಿಕ ಕಡಿಮೆಯಾಗುತ್ತಿಲ್ಲ, ಎಚ್ಚರವಿರಲಿ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ

Photo: Fabrice Coffrini/AFP
ವಿಶ್ವಸಂಸ್ಥೆ, ಜು.10: ಡೆಲ್ಟಾ ರೂಪಾಂತರಿತ ಸೋಂಕು ಹರಡುತ್ತಿರುವುದರಿಂದ ವಿಶ್ವದ ಹಲವೆಡೆ ಕೊರೋನ ವೈರಸ್ ಸೋಂಕು ಹೆಚ್ಚುತ್ತಿದ್ದು, ಇದು ದುರ್ಬಲಗೊಳ್ಳುವ ಲಕ್ಷಣ ಕಂಡುಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಹಲವು ದೇಶಗಳಲ್ಲಿ ಲಸಿಕೀಕರಣ ಪ್ರಕ್ರಿಯೆಯಿಂದ ಸೋಂಕಿನ ಗಂಭೀರತೆ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಇನ್ನೂ ಕೆಲವು ದೇಶಗಳಲ್ಲಿ ಲಸಿಕೆಯ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಮತ್ತು ಅಧಿಕ ಮರಣ ಪ್ರಮಾಣದ ಸಮಸ್ಯೆಯಿದೆ ಎಂದು ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ವಿಶ್ವದಾದ್ಯಂತ ಸುಮಾರು 5 ಲಕ್ಷ ಹೊಸ ಪ್ರಕರಣ, ಸುಮಾರು 9,300 ಸಾವು ಸಂಭವಿಸಿದೆ. ಕಳೆದ 2 ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ 6 ವಲಯಗಳ ಪೈಕಿ 5ರಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿದೆ, ಆಫ್ರಿಕಾದಲ್ಲಿ ಮರಣದ ಪ್ರಮಾಣ 30%ದಿಂದ 40%ಕ್ಕೆ ಹೆಚ್ಚಿದೆ. ಇದು ಖಂಡಿತಾ ಸಾಂಕ್ರಾಮಿಕ ಕಡಿಮೆಯಾಗುವ ಲಕ್ಷಣವಲ್ಲ ಎಂದವರು ಹೇಳಿದರು.
ಡೆಲ್ಟಾ ರೂಪಾಂತರಿತ ಸೋಂಕು ವೇಗವಾಗಿ ಹರಡುತ್ತಿರುವುದು, ಜಾಗತಿಕವಾಗಿ ಲಸಿಕೀಕರಣ ಪ್ರಕ್ರಿಯೆಯ ನಿಧಾನಗತಿ, ಮಾಸ್ಕ್ ಧಾರಣೆ , ಸುರಕ್ಷಿತ ಅಂತರ ಪಾಲನೆ ಮತ್ತಿತರ ಸುರಕ್ಷಾ ಕ್ರಮಗಳನ್ನು ಸಡಿಲಗೊಳಿಸಿರುವುದು ಸೋಂಕು ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ನಿರ್ಬಂಧ ಸಡಿಲಗೊಳಿಸುವ ಮುನ್ನ ಜಾಗರೂಕತೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಈ ವಾರ ರಾಷ್ಟ್ರಗಳಿಗೆ ಕರೆ ನೀಡಿದೆ. ಇಂಗ್ಲೆಂಡಿನಲ್ಲಿ ಉಳಿದಿರುವ ನಿರ್ಬಂಧಗಳನ್ನೂ ಜುಲೈ 19ರಿಂದ ತೆರವುಗೊಳಿಸಲು ಸರಕಾರ ನಿರ್ಧರಿಸಿದ್ದು ಮಾಸ್ಕ್ ಧರಿಸುವುದು ಅವರವರ ಆಯ್ಕೆಗೆ ಬಿಟ್ಟ ವಿಷಯ ಎಂದಿದೆ. ಅಮೆರಿಕ ಮತ್ತು ಯುರೋಪ್ನ ಬಹುತೇಕ ದೇಶಗಳೂ ನಿರ್ಬಂಧ ಸಡಿಲಿಸಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಕೊರೋನ ಸಾಂಕ್ರಾಮಿಕ ಕ್ಷೀಣಿಸುತ್ತಿದೆ ಮತ್ತು ಎಲ್ಲಾ ವಿಷಯಗಳೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂದುಕೊಳ್ಳುವುದು ಅಪಾಯಕಾರಿ ಕಲ್ಪನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ಎಚ್ಚರಿಸಿದ್ದಾರೆ.







