ಕೆಎಸ್‌ಆರ್ ಡ್ಯಾಂನಲ್ಲಿ ಬಿರುಕು ಬಿಟ್ಟಿದ್ದರೆ ರಕ್ಷಣೆ ಹೊಣೆ ಸರಕಾರದ್ದು: ಸಚಿವ ಲಿಂಬಾವಳಿ

ಉಡುಪಿ, ಜು.10: ಕೆಎಸ್‌ಆರ್ ಡ್ಯಾಂಗೆ ನಿಜವಾಗಿ ಬಿರುಕು ಬಿಟ್ಟಿದ್ದರೆ ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಆಗಿದೆ. ಈ ಕಾಮಗಾರಿ ಯನ್ನು ನೀರಾವರಿ ಇಲಾಖೆಯವರು ನಿಶ್ಛಿತವಾಗಿ ಕೈಗೆತ್ತಿಕೊಳ್ಳುತ್ತಾರೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಸಮಲತಾ ಇಬ್ಬರು ಜಗಳ ಆಡುತ್ತಿದ್ದಾರೆ. ಅದರ ಬಗ್ಗೆ ನಮ್ಮದು ಏನು ಪ್ರತಿಕ್ರಿಯೆ ಇಲ್ಲ. ಇವರಿಬ್ಬರು ಪರಸ್ಪರ ಆರೋಪ ಮಾಡುವ ಮೂಲಕ ರಾಜಕೀಯ ವ್ಯಕ್ತಿಗಳ ಮಟ್ಟವನ್ನು ಕೆಳಗದೆ ಇಳಿಸುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂತದಲ್ಲ. ಅದರ ಬಗ್ಗೆ ಇಬ್ಬು ಯೋಚನೆ ಮಾಡ ಬೇಕು ಎಂದರು.
ಸುಮಲತಾ ಅವರನ್ನು ಬಿಜೆಪಿಯವರು ಯಾರು ಕೂಡ ಬೆಂಬಲಿಸದೆ ಏಕಾಂಗಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತ್ರಿಯಿಸಿದ ಸಚಿವರು, ಅವರು ಏಕಾಂಗಿಯಾಗಿಯೇ ಗೆದ್ದಿರುವುದು ಎಂದು ಹೇಳಿದರು.
ಎಲ್ಲ ಕಲಾವಿದರಿಗೆ ಪರಿಹಾರ
35ವರ್ಷಗಿಂತ ಕೆಳಗಿನ ಯಕ್ಷಗಾನ ಕಲಾವಿದರಿಗೆ ಕೋವಿಡ್ ಪರಿಹಾರ ನೀಡದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆರ್ಥಿಕ ಕೊರತೆಯ ಮಧ್ಯೆಯೂ ಕಳೆದ ಬಾರಿ 16ಸಾವಿರ ಕಲಾವಿದರಿಗೆ ತಲಾ 3000ರೂ. ಪರಿಹಾರ ಧನ ನೀಡಲಾಗಿದೆ. ಈ ವರ್ಷ ಅವರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಪ್ರತಿ ಜಿಲ್ಲೆಯಲ್ಲಿ ಆನ್‌ಲೈನ್ ಮೂಲಕ ಒಟ್ಟು 20713 ಅರ್ಜಿ ಗಳು ಸಲ್ಲಿಕೆಯಾಗಿವೆ. ಇದಕ್ಕೆ ನಮಗೆ ನೀಡಿರುವ ಅನುದಾನಕ್ಕಿಂತ ಹೆಚ್ಚಿನ ಅನುದಾನ ಬೇಕಾಗಿದೆ. ಇದನ್ನು ಆರ್ಥಿಕ ಇಲಾಖೆಗೆ ಒಪ್ಪಿಸಿ ಎಲ್ಲರಿಗೂ ನೀಡಿ ದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ರೀತಿಯ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಕೊರೋನದಿಂದಾಗಿ ನಮ್ಮದು ಸೇರಿದಂತೆ ಎಲ್ಲ ಇಲಾಖೆಗೆ ಅನುದಾನ ಈ ಹಿಂದಿನ ಪ್ರಮಾಣದಲ್ಲಿ ಸಿಗುವುದಿಲ್ಲ. ಆದುದರಿಂದ ಎಲ್ಲ ಜಿಲ್ಲೆ ಗಳಲ್ಲಿಯೂ ರಂಗಾಯಣ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಸದ್ಯ ನಾಲ್ಕು ರಂಗಾಯಣ ರಾಜ್ಯದಲ್ಲಿ ಇದೆ. ಉಡುಪಿಯಲ್ಲಿ ರಂಗ ಮಂದಿರದ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
‘ಸಿದ್ದರಾಮಯ್ಯ ಹೇಳಿಕೆ ಹಿಂಪಡೆಯಲಿ’
ಕಾರ್ಕಳ ರಾಧಾಕೃಷ್ಣ ನಾಯಕ್ ಭಾರತೀಯ ಸೇನೆಯ ಬಗ್ಗೆ ಅಪಮಾನ ಮಾಡಿರುವುದನ್ನು ಹಿರಿಯ ರಾಜಕಾರಣಿ ಸಿದ್ಧರಾಮಯ್ಯ ಖಂಡಿಸುವ ಬದಲು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರು ಕ್ರಮ ಜರಗಿಸಿರುವುದು ತಪ್ಪು ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ಸಿದ್ದರಾಮಯ್ಯನವರು ತಕ್ಷಣ ತಮ್ಮ ಈ ಹೇಳಿಕೆ ಹಿಂಪಡೆಯಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.







