ಉಡುಪಿ ಜಿಲ್ಲೆಯಲ್ಲಿ 68,000 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಸಮಸ್ಯೆ : ಅರಣ್ಯ ಸಚಿವ ಲಿಂಬಾವಳಿ
'3-4 ತಿಂಗಳಲ್ಲಿ ಸಮಸ್ಯೆ ಇತ್ಯರ್ಥ'

ಉಡುಪಿ, ಜು.10: ಉಡುಪಿ ಜಿಲ್ಲೆಯಲ್ಲಿ 68,000 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಸಮಸ್ಯೆಗಳಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ವಿಧಾನ ಸಭಾ ಕ್ಷೇತ್ರವಾರು ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಈ ಸಮಸ್ಯೆಯನ್ನು ಇತ್ಯರ್ಥ ಮಾಡ ಲಾಗುವುದು ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಅವರು ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದರು.
ಕುಮ್ಕಿ, ಗೋಮಾಳ ಜಮೀನು ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ರಾಜ್ಯಮಟ್ಟದಲ್ಲಿ ಜಂಟಿ ಸಭೆಯನ್ನು ಅತೀ ಶೀಘ್ರವೇ ಕರೆಯಲಾಗುವುದು. ಈ ಬಗ್ಗೆ ಕಂದಾಯ ಸಚಿವರೊಂದಿಗೆ ಮಾತುಕತೆ ನಡೆಸ ಲಾಗುವುದು. ಆ ಸಭೆಯಲ್ಲಿ ಚರ್ಚಿಸಿ ಈ ಸಮಸ್ಯೆಗಳನ್ನು ಕೂ ಇತ್ಯರ್ಥ ಮಾಡುತ್ತೇವೆ ಎಂದರು.
ರಸ್ತೆಗಳ ಮೇಲ್ದರ್ಜೆಗೆ ಅನುಮತಿ
ವನ್ಯಜೀವಿ ಮೀಸಲು ಅರಣ್ಯ ಹೊರತು ಪಡಿಸಿ ಉಳಿದ ಅರಣ್ಯ ಪ್ರದೇಶದಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು(ಮಣ್ಣಿನ ರಸ್ತೆಯನ್ನು ಡಾಮರೀಕರಣ ಮಾಡಲು, ಡಾಮರೀಕರಣ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲು) ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅಧಿಕಾರವನ್ನು ನೀಡಲಾಗಿದೆ. ಅವರು ಅದಕ್ಕೆ ಅನುಮತಿಯನ್ನು ನೀಡಲಿದ್ದಾರೆ. ವನ್ಯಜೀವಿ ಮೀಸಲು ಅರಣ್ಯದಲ್ಲಿನ ರಸ್ತೆಗೆ ಅನುಮತಿ ಪಡೆಯಲು ಆನ್‌ಲೈನ್‌ನಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿಗೆ ಅರ್ಜಿ ಹಾಕಬೇಕು. ಈ ಮಂಡಳಿಗೆ ಮುಖ್ಯಮತ್ರಿ ಅಧ್ಯಕ್ಷರಾಗಿದ್ದರೆ, ನಾನು ಉಪಾಧ್ಯಕ್ಷನಾಗಿದ್ದೇನೆ. ಈ ಬಗ್ಗೆ ಸಭೆ ನಡೆಸಿ ಅಂತಹ ಅರ್ಜಿಗಳಿಗೂ ಶೀಘ್ರ ಅನುಮತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಮೀಸಲು ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗೆ ಆನ್‌ಲೈನ್ ಅರ್ಜಿ ಹಾಕ ಬೇಕಾಗುತ್ತದೆ. 12 ಹೆಕ್ಟೇರ್‌ಗಿಂತ ಹೆಚ್ಚು ಅರಣ್ಯ ಇದ್ದರೆ ಕೇಂದ್ರ ಸರಕಾರಕ್ಕೆ ಬರುತ್ತದೆ. ಅದಕ್ಕಿಂತ ಕಡಿಮೆ ಇರುವ ಅರಣ್ಯದ ಅರ್ಜಿಗಳು ರಾಜ್ಯದಲ್ಲಿರುವ ಪ್ರಾದೇಶಿಕ ಕಚೇರಿ ಬಂದಿವೆ. ನಾನು ಬೆಂಗಳೂರು ಹೋದ ತಕ್ಷಣ, ಪ್ರಾದೇಶಿಕ ಕಚೇರಿಯ ಉಸ್ತುವಾರಿ ಜೊತೆ ಸಭೆ ನಡೆಸಿ ಆದಷ್ಟು ಬೇಗ ಈ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು.
ಅಭಿವೃದ್ಧಿ ಕಾಮಗಾರಿಗೆ ಎನ್‌ಓಸಿ
ಅರಣ್ಯ ಪ್ರದೇಶದಲ್ಲಿ ಬಸ್ ನಿಲ್ದಾಣ, ಸೇತುವೆ ಇತರ ಅಭಿವೃದ್ಧಿ ಕಾಮಗಾರಿ ಗಳಿಗೆ ಕೆಲವೊಂದು ಕಾನೂನು ಅಡೆತಡೆಗಳು ಬರುತ್ತಿವೆ. ಮಾನವೀಯ ದೃಷ್ಠಿ ಯಿಂದ ಗಮನದಲ್ಲಿಟ್ಟುಕೊಂಡು ಮರ ಕಡಿಯದೆ ಜನರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಲು ನಿರಾಪೇಕ್ಷಣೀಯ ಪತ್ರಗಳನ್ನು ನೀಡುವಂತೆ ಶಾಸಕರು ವಿನಂತಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿಗೆ ಹೋದ ಕೂಡಲೇ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ, ಅರಣ್ಯ ಇಲಾಖೆಯ ಎಪಿಪಿಸಿಎಫ್ ಮಿಲ್ಲೋ ಟಾಗೋ, ಸಿಸಿಎಫ್ ಪ್ರಕಾಶ್ ನೇಟಲ್ಕರ್, ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಓ ರುತ್ರನ್, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.
‘ಪೇಜಾವರ ಶ್ರೀ ಸ್ಮತಿವನ’ ಪ್ರಸ್ತಾವದ ಬಗ್ಗೆ ಪರಿಶೀಲನೆ
ನೀಲಾವರದಲ್ಲಿ ಪೇಜಾವರ ಸ್ವಾಮೀಜಿಯ ಹೆಸರಿನಲ್ಲಿ ಸ್ಮತಿವನ ನಿರ್ಮಿಸುವ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಪ್ರಸ್ತಾವ ಸಲ್ಲಿಸಿದ್ದಾರೆ. ಅದರ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿ ಮುಖ್ಯವಾಗಿ ವಿಶ್ವ ವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳು ಸ್ಥಾಪನೆ ಆಗಬೇಕು. ಇದು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಿರುವ ವಿಷಯ ಆಗಿರುವುದರಿಂದ ಉಪಮುಖ್ಯ ಮಂತ್ರಿ ಗಮನಕ್ಕೆ ತಂದು ಕನ್ನಡ ಸಂಸ್ಕೃತಿ ಸಚಿವನಾಗಿ ಪರಿಶೀಲಿಸುವ ಕೆಲಸ ಮಾಡುತ್ತೇನೆ ಎಂದರು.







