ಉಡುಪಿ: 113 ಮಂದಿಗೆ ಕೊರೋನ ಪಾಸಿಟಿವ್, ಕೋವಿಡ್ ಗೆ ಓರ್ವ ಮಹಿಳೆ ಬಲಿ

ಉಡುಪಿ, ಜು.10: ಜಿಲ್ಲೆಯಲ್ಲಿ ಶನಿವಾರ 113 ಮಂದಿ ಕೊರೋನಕ್ಕೆ ಪಾಸಿಟಿವ್ ಆಗಿದ್ದು, 77 ವರ್ಷ ಪ್ರಾಯದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ದಿನದಲ್ಲಿ 96 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 902 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕುಂದಾಪುರದ 77ರ ಹರೆಯ ಮಹಿಳೆಯೊಬ್ಬರು ಕೊರೋನ ದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 401ಕ್ಕೇರಿದೆ. ರಕ್ತದೊತ್ತಡ, ಮಧುಮೇಹ ಸಮಸ್ಯೆಯನ್ನು ಹೊಂದಿದ್ದ ಈ ಮಹಿಳೆ ಕೊರೋನಕ್ಕೆ ಪಾಸಿಟಿವ್ ಆಗಿದ್ದು, ಉಸಿರಾಟ ತೊಂದರೆಗಾಗಿ ಜು.2ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ಮೃತಪಟ್ಟರು.
ಶನಿವಾರ ಪಾಸಿಟಿವ್ ದೃಢಪಟ್ಟ 113 ಮಂದಿಯಲ್ಲಿ 48 ಮಂದಿ ಪುರುಷರು ಹಾಗೂ 65 ಮಂದಿ ಮಹಿಳೆಯರಿದ್ದಾರೆ.ಉಡುಪಿ ತಾಲೂಕಿನ 50, ಕುಂದಾಪುರ ತಾಲೂಕಿನ 30, ಕಾರ್ಕಳ ತಾಲೂಕಿನ 33 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. 12 ಮಂದಿ ಕೋವಿಡ್ ಆಸ್ಪತ್ರೆ ಹಾಗೂ ಉಳಿದ 84 ಮಂದಿ ಮನೆ ಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶುಕ್ರವಾರ 96 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 66,212ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3022 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 67,515 ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,09,413 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಲಾಗಿದೆ.
ಮತ್ತೊಬ್ಬರಲ್ಲಿ ಬ್ಲ್ಯಾಕ್ ಫಂಗಸ್
ಶನಿವಾರವೂ ಹೊರಜಿಲ್ಲೆಯ ಒಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು 9 ಮಂದಿ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ಎಂಟು ಮಂದಿ ಹೊರ ಜಿಲ್ಲೆಯವರಾರೆ ಒಬ್ಬರು ಮಾತ್ರ ಜಿಲ್ಲೆಯವರು.
7,751 ಮಂದಿಗೆ ಕೋವಿಡ್ ಲಸಿಕೆ
ಉಡುಪಿ ಜಿಲ್ಲೆಯಲ್ಲಿ ಇಂದು ಒಟ್ಟು 7,751 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 2,385 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 5,366 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 1500 ಮಂದಿ ಮೊದಲ ಡೋಸ್ ಹಾಗೂ 114 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 846 ಮಂದಿ ಮೊದಲ ಡೋಸ್ ಹಾಗೂ 5227 ಮಂದಿ ಎರಡನೇ ಡೋಸ್ ನ್ನು ಪಡೆದಿದ್ದಾರೆ. 7 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 30 ಮಂದಿ ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,41,347 ಮಂದಿ ಮೊದಲ ಡೋಸ್ ಹಾಗೂ 1,44,601 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ.







