ಉಡುಪಿ: ರವಿವಾರದಿಂದ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ

ಉಡುಪಿ, ಜು.10: ರವಿವಾರದಿಂದ ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಪ್ರಕಟಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಭಕ್ತರ ಅನುಕೂಲಕ್ಕಾಗಿ ಪರ್ಯಾಯ ಅದಮಾರುಶ್ರೀಗಳ ಆಶಯದಂತೆ ರವಿವಾರದಿಂದ ಶ್ರೀಕೃಷ್ಣ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡ ಲಾಗುತ್ತಿದೆ. ಭಕ್ತರು ಅಪರಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಭಕ್ತರು ಸಹಕರಿಸಿ ಮಾಸ್ಕ್ ಧರಿಸಿ, ಸುರಕ್ಷತಾ ಅಂತರವನ್ನು ಕಾಪಾಡಿಕೊಂಡು ಶ್ರೀಕೃಷ್ಣ ದರ್ಶನ ಪಡೆದುಕೊಳ್ಳಬೇಕು. ಇದರೊಂದಿಗೆ ಯಾರೂ ಒಳಗೆ ನಮಸ್ಕಾರ ಇತ್ಯಾದಿಯನ್ನು ಮಾಡದೇ ಸಹಕರಿಸಿ, ಎಲ್ಲರಿಗೂ ಶ್ರೀಕೃಷ್ಣನ ದರ್ಶನ ಲಭಿಸು ವಂತಾಗಲಿ ಎಂದು ಶ್ರೀಈಶಪ್ರಿಯ ತೀರ್ಥರು ಆಶಿಸಿದ್ದಾರೆ ಎಂದು ಗೋವಿಂದರಾಜ್ ತಿಳಿಸಿದ್ದಾರೆ. ಇದರಿಂದ ಸುಮಾರು ಮೂರು ತಿಂಗಳ ಬಳಿಕ ಉಡುಪಿ ಶ್ರೀಕೃಷ್ಣ ಮಠ ಮತ್ತೆ ಭಕ್ತರಿಗಾಗಿ ತೆರೆದುಕೊಳ್ಳಲಿದೆ.
2022ರಲ್ಲಿ ನಡೆಯುವ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಮೂರನೇಯದಾದ ಕಟ್ಟಿಗೆ ಮುಹೂರ್ತ ರವಿವಾರ ಬೆಳಗ್ಗೆ 8:45ಕ್ಕೆ ಕೃಷ್ಣಾಪುರ ಮಠದ ವತಿಯಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







