'ರಾಜ್ಯ ಸಚಿವ ಸಂಪುಟ ವಿಸ್ತರಣೆ' ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಕಲಬುರಗಿ, ಜು. 10: ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರಿಂದ ನನಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕ್ಷಣದ ವರೆಗೂ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ನನಗೆ ಕೇಂದ್ರ ನಾಯಕರಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹಾಗೊಂದು ವೇಳೆ ಬಂದರೆ ಅದನ್ನು ಮುಚ್ಚಿಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.
ಸೂಕ್ತ ಸಂದರ್ಭದಲ್ಲಿ ವರಿಷ್ಠರು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಪರಮಾಧಿಕಾರ. ಆದರೂ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ದಿಲ್ಲಿ ನಾಯಕರ ಒಪ್ಪಿಗೆ ಅನಿವಾರ್ಯ ಎಂದು ಯಡಿಯೂರಪ್ಪ ನುಡಿದರು.
ಯಾರೊಬ್ಬರೂ ಜಗಳ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳಿದ್ದರೆ ಕುಳಿತು ಇತ್ಯರ್ಥಪಡಿಸಿಕೊಳ್ಳಿ. ಸಂಸದೆ ಸುಮಲತಾ ಅವರ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಕುಮಾರಸ್ವಾಮಿ ಅಥವಾ ಎಚ್‍ಡಿಕೆಯವರ ಬಗ್ಗೆ ಸುಮಲತಾ ಅವರಾಗಲಿ ಹಗುರವಾಗಿ ಮಾತನಾಡಬಾರದು. ಎರಡು ಕಡೆಯ ಕಾರ್ಯಕರ್ತರು ಆವೇಶಕ್ಕೆ ಒಳಗಾಗಬಾರದು ಎಂದು ಯಡಿಯೂರಪ್ಪ ಇದೇ ವೇಳೆ ಮನವಿ ಮಾಡಿದರು.
ನಾವೆಲ್ಲರೂ ಸಹೋದರರಂತೆ ಬದುಕೋಣ. ಸುಖಾಸುಮ್ಮನೆ ಜಗಳವಾಡುವುದರಲ್ಲಿ ಅರ್ಥವಿಲ್ಲ. ಇಬ್ಬರು ಹಿರಿಯರಿದ್ದೀರಿ. ಕೂಡಲೇ ಇದಕ್ಕೆ ಇತೀಶ್ರೀ ಹಾಡಬೇಕೆಂದು ಸಲಹೆ ಮಾಡಿದ ಯಡಿಯೂರಪ್ಪ, ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವ ತೃಪ್ತಿ ನನಗಿದೆ. ಅವರೊಬ್ಬ ಮೇರುನಟ ಎಂದರು.







