ಬ್ರಹ್ಮಾವರ: 3000 ಗಿಡ ನೆಡುವ ಕಾರ್ಯಕ್ರಮಕ್ಕೆ ರವಿವಾರ ಚಾಲನೆ
ಉಡುಪಿ, ಜು.10: ಬ್ರಹ್ಮಾವರ-ಹೆಬ್ರಿ ನಡುವಿನ ಬ್ರಹ್ಮಾವರ- ಸೀತಾನದಿ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಸುಮಾರು ಏಳು ಕಿ.ಮೀ. ವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿದ್ದ 1014 ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಬದಲಿಯಾಗಿ ಮೂರು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ನಾಳೆ ಚಾಲನೆ ನೀಡ ಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಅಭಿವೃದ್ಧಿಯೊಂದಿಗೆ ಪರಿಸರ ಸಮತೋಲನವನ್ನು ರಕ್ಷಿಸುವ ಕಾಳಜಿಯಿಂದ ಕಡಿದಿರುವ ಮರಗಳ ಬದಲು ಅದರ ಶೇ.10ರಷ್ಟು ಗಿಡಗಳನ್ನು ನಾಳೆ ನೆಡಲಿದ್ದು, ಇದಕ್ಕೆ ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಲಿದ್ದಾರೆ ಎಂದವರು ಹೇಳಿದರು.
ರವಿವಾರ ಬೆಳಗ್ಗೆ 8:30ಕ್ಕೆ ಬ್ರಹ್ಮಾವರ ಕೃಷಿ ಕೇಂದ್ರದ ಸಮೀಪ ಕಾರ್ಯಕ್ರಮ ನಡೆಯಲಿದೆ.ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಮೂರು ಸಾವಿರ ವಿವಿಧ ಜಾತಿಯ ಹಣ್ಣಿನ ಹಾಗೂ ಹೂವಿನ ಗಿಡಗಳನ್ನು ನೆಡಲಾಗುತ್ತದೆ. ಇದರೊಂದಿಗೆ ಸುತ್ತಮುತ್ತಲಿನ ಅರಣ್ಯ, ಸರಕಾರಿ ಹಾಗೂ ಖಾಸಗಿ ಜಾಗಗಳಲ್ಲೂ ಸುಮಾರು ಏಳು ಸಾವಿರದಷ್ಟು ಗಿಡಗಳನ್ನು ನೆಡಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





