ಗಗನಯಾತ್ರಿ ಆಗಬೇಕೆಂಬ ಕನಸು ನನಸಾಗುತ್ತಿದೆ: ಶಿರೀಶಾ ಬಾಂದ್ಲಾ
ಬಾಹ್ಯಾಕಾಶ ಯಾನ ನಡೆಸಲಿರುವ ಭಾರತದ 3ನೇ ಮಹಿಳೆ

photo : twiiter/@live_wiremedia
ಹ್ಯೂಸ್ಟನ್, ಜು.10: ಗಗನಯಾತ್ರಿ ಆಗಬೇಕೆಂಬುದು ಬಾಲ್ಯದಿಂದಲೂ ನಾನು ಕಂಡ ಕನಸಾಗಿತ್ತು. ಅದು ನನಸಾಗುವ ಸಮಯ ಹತ್ತಿರವಾಗುತ್ತಿದೆ ಎಂದು ಬಾಹ್ಯಾಕಾಶ ಯಾನ ನಡೆಸಲಿರುವ ಭಾರತದ 3ನೇ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿರುವ ಭಾರತೀಯ ಸಂಜಾತೆ ಅಮೆರಿಕನ್ ಪ್ರಜೆ ಶಿರೀಶಾ ಬಾಂದ್ಲಾ ಹೇಳಿದ್ದಾರೆ.
ಜುಲೈ 11ರಂದು ನ್ಯೂಮೆಕ್ಸಿಕೋದಿಂದ ವರ್ಜಿನ್ ಗ್ಯಾಲಕ್ಟಿಕ್ನ ಟು ಯುನಿಟಿ ಗಗನನೌಕೆಯಲ್ಲಿ ಅಂತರಿಕ್ಷದೆಡೆಗೆ ಪ್ರಯಾಣ ಬೆಳೆಸುವ 6 ಮಂದಿಯಲ್ಲಿ ಶಿರೀಶಾ ಬಾಂದ್ಲಾ ಒಬ್ಬರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ಈ ಸಾಧನೆ ತೋರಿದ್ದಾರೆ. ಗಗನಯಾತ್ರಿ ನಂಬರ್ 004 ಆಗಿರುವ ಸಿರೀಶಾ ಅನುಭವಿ ಸಂಶೋಧಕರ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ್ದ ಶಿರೀಶಾ, ಮುಂದಿನ ದಿನಗಳಲ್ಲಿ ಅಮೆರಿಕದ ಟೆಕ್ಸಾಸ್ನ ಹ್ಯೂಸ್ಟನ್ನಲ್ಲಿ ಶಿಕ್ಷಣ ಪಡೆದವರು. ನಾಸಾದ ಜಾನ್ಸನ್ ಅಂತರಿಕ್ಷ ಕೇಂದ್ರದ ಬಳಿಯ ನಗರದಲ್ಲಿ ವಾಸಿಸುತ್ತಿದ್ದ ಶಿರೀಶಾ ಪೈಲಟ್ ಶಿಕ್ಷಣ ಪಡೆದು ನಾಸಾದ ಅಂತರಿಕ್ಷ ಯೋಜನೆಗೆ ಪ್ರವೇಶ ಪಡೆಯುವ ಹಂಬಲವಿತ್ತು. ಆದರೆ ಕಣ್ಣಿನ ದೃಷ್ಟಿ ಕಡಿಮೆಯಿದ್ದ ಕಾರಣ ಪೈಲಟ್ ಆಗುವ ಕನಸಿಗೆ ತಿಲಾಂಜಲಿ ನೀಡಬೇಕಾಯಿತು. ಬಳಿಕ ಪರ್ದ್ಯೂ ವಿವಿಯಲ್ಲಿ ಏರೊನಾಟಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿ 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆ ಸೇರಿದ್ದು ಸಂಸ್ಥೆಯ ಸರಕಾರಿ ವ್ಯವಹಾರ ಮತ್ತು ಸಂಶೋಧನೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಜುಲೈ 11ರ ಅಂತರಿಕ್ಷ ಯಾನಕ್ಕೆ ತನ್ನನ್ನು ಆಯ್ಕೆ ಮಾಡಿರುವುದಾಗಿ ಕರೆ ಬಂದಾಗ ಕನಸು ಈಡೇರುವ ಕ್ಷಣ ಬಂತೆಂದು ಖುಷಿಯಾಯ್ತು. ಕೆಲ ಹೊತ್ತು ಮಾತುಗಳೇ ಬರಲಿಲ್ಲ. ವಿವಿಧ ಹಿನ್ನೆಲೆಯಿಂದ, ವಿವಿಧ ಪ್ರದೇಶಗಳಿಂದ ಬರುವ ಜನರೊಂದಿಗೆ ಅಂತರಿಕ್ಷದಲ್ಲಿ ಸಮಯ ಕಳೆಯುವುದು ನಿಜಕ್ಕೂ ಅದ್ಭುತ ಅವಕಾಶವಾಗಿದೆ ಎಂದು 34 ವರ್ಷದ ಶಿರೀಶಾ ಹೇಳಿದ್ದಾರೆ.
ಜುಲೈ 11ರ ಅಂತರಿಕ್ಷ ಯಾನ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆ ಸಿಬಂದಿಗಳ ಸಹಿತ ನಡೆಸುವ 4ನೇ ಯಾನ ಮತ್ತು ಸಂಪೂರ್ಣ ಸಿಬ್ಬಂದಿ ವರ್ಗ(2 ಪೈಲಟ್, 4 ತಜ್ಞ ಸಂಶೋಧಕರು)ದ ಸಹಿತ ನಡೆಸುವ ಪ್ರಪ್ರಥಮ ಗಗನಯಾನವಾಗಿದ್ದು ಸಂಸ್ಥೆಯ ಸ್ಥಾಪಕ ರಿಚರ್ಡ್ ಬ್ರಾನ್ಸನ್ ಅವರೂ ತಂಡದಲ್ಲಿದ್ದಾರೆ.







