ಫೆಲೆಸ್ತೀನ್ ತೀವ್ರವಾದಿ ಮುಖಂಡ ಅಹ್ಮದ್ ಜಿಬ್ರೀಲ್ ಅಂತ್ಯಸಂಸ್ಕಾರ

photo: twiiter/@HaidarAkarar
ದಮಾಸ್ಕಸ್, ಜು.10: ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್ ಜನರಲ್ ಕಮಾಂಡ್ ಸಂಘಟನೆಯ ಮುಖಂಡ ಅಹ್ಮದ್ ಜಿಬ್ರಿಲ್ ಅವರ ಅಂತ್ಯಸಂಸ್ಕಾರ ಸಿರಿಯಾದ ರಾಜಧಾನಿ ದಮಾಸ್ಕಸ್ನಲ್ಲಿ ಶುಕ್ರವಾರ ನಡೆದಿದೆ ಎಂದು ಮೂಲಗಳು ಹೇಳಿವೆ.
ಇಸ್ರೇಲ್ ವಿರುದ್ಧ 1970 ಮತ್ತು 80ರ ದಶಕದಲ್ಲಿ ದಾಳಿ ಸಂಘಟಿಸುತ್ತಿದ್ದ ಫೆಲೆಸ್ತೀನ್ ತೀವ್ರವಾದಿ ಸಂಘಟನೆಯಾಗಿದ್ದ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್ ನ ಮುಖಂಡರಾಗಿದ್ದ 83 ವರ್ಷದ ಜಿಬ್ರಿಲ್ ದೀರ್ಘ ಕಾಲದ ಅಸ್ವಸ್ಥತೆಯಿಂದ ಬುಧವಾರ ದಮಾಸ್ಕಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಪುತ್ರ, 2002ರಲ್ಲಿ ಬೈರೂತ್ನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಮೃತರಾಗಿದ್ದ ಜಿಲಾದ್ ಸಮಾಧಿಯ ಬಳಿಯೇ ಜಿಬ್ರಿಲ್ ಅಂತ್ಯಸಂಸ್ಕಾರ ನಡೆಸಲಾಗಿದೆ.
ಅದಕ್ಕೂ ಮುನ್ನ ಮೃತದೇಹವಿದ್ದ ಪೆಟ್ಟಿಗೆಗೆ ಫೆಲೆಸ್ತೀನ್ನ ಧ್ವಜ ಹೊದಿಸಿ ಡೆಮಾಸ್ಕಸ್ನ ಅಲ್-ಒಥ್ಮಾನ್ ಮಸೀದಿಯಲ್ಲಿ ಇರಿಸಿ ಜನರ ಅಂತಿಮ ಗೌರವ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಯಿತು. ಅಂತ್ಯಸಂಸ್ಕಾರದಲ್ಲಿ ಫೆಲೆಸ್ತೀನ್ ಮತ್ತು ಸಿರಿಯನ್ನ ನೂರಾರು ಬೆಂಬಲಿಗರು ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್ನ ಮುಖಂಡರು, ಡೆಮಾಸ್ಕಸ್ನಲ್ಲಿ ನೆಲೆ ಹೊಂದಿರುವ ಇತರ ಫೆಲೆಸ್ತೀನ್ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
1938ರಲ್ಲಿ ಜಾಫ್ಫಾದಲ್ಲಿ ಜನಿಸಿದ್ದ ಜಿಬ್ರೀಲ್ ತಂದೆ ಫೆಲೆಸ್ತೀನ್ ಪ್ರಜೆ, ತಾಯಿ ಸಿರಿಯಾ ಪ್ರಜೆಯಾಗಿದ್ದರು. ಬಳಿಕ ಕುಟುಂಬದವರು ಸಿರಿಯಾಕ್ಕೆ ಸ್ಥಳಾಂತರಗೊಂಡಿದ್ದು ಅಲ್ಲಿ ಜಿಬ್ರಿಲ್ ಸಿರಿಯಾದ ಸೇನೆಯ ಅಧಿಕಾರಿಯಾಗಿ ನೇಮಕಗೊಂಡು ಸಿರಿಯಾದ ಪೌರತ್ವ ಪಡೆದರು.
ಜಿಬ್ರಿಲ್ ಸಮಕಾಲೀನ ಫೆಲೆಸ್ತೀನ್ ಚರಿತ್ರೆಗೆ ಕಾರಣಕರ್ತರಾದ, ಸಮಕಾಲೀನ ಫೆಲೆಸ್ತೀನ್ ಕ್ರಾಂತಿಯ ಸ್ಥಾಪಕ ಮುಖಂಡರಲ್ಲಿ ಒಬ್ಬರಾಗಿದ್ದರು ಎಂದು ಡಮಾಸ್ಕಸ್ಗೆ ಪೆಲೆಸ್ತೀನಿ ಅಥಾರಿಟಿಯ ರಾಯಭಾರಿಯಾಗಿರುವ ಸಮೀರ್ ರಿಫಾಯಿ ಹೇಳಿದ್ದಾರೆ. 1950ರಲ್ಲಿ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್ ಸ್ಥಾಪಿಸಿದ್ದ ಜಿಬ್ರಿಲ್, ಸೈದ್ಧಾಂತಿಕ ಭಿನ್ನಾಭಿಪ್ರಾಯದ ಬಳಿಕ 1968ರಿಂದ ಸಂಘಟನೆಯಿಂದ ದೂರವಾಗಿದ್ದರು. ಬಳಿಕ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್ ಜನರಲ್ ಕಮಾಂಡ್ ಸ್ಥಾಪಿಸಿದ್ದು ಪಿಎಲ್ಒ ಮುಖಂಡ ಯಾಸಿರ್ ಅರಾಫತ್ ಜತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಸಂಘಟನೆಯಿಂದಲೂ 1974ರಿಂದ ದೂರ ಉಳಿದಿದ್ದರು.
ಇಸ್ರೇಲ್ ವಿರುದ್ಧ ನಡೆಸಿದ ಹಲವು ಪ್ರಮುಖ ದಾಳಿಗಳಲ್ಲಿ ಇವ ರ ಸಂಘಟನೆಯ ಹೆಸರು ಮುನ್ನೆಲೆಗೆ ಬಂದಿತ್ತು. 1968ರಲ್ಲಿ ಎಲ್ ಅಲ್ ಜೆಟ್ವಿಮಾನದ ಅಪಹರಣ, ಝ್ಯೂರಿಚ್ ವಿಮಾನ ನಿಲ್ದಾಣದಲ್ಲಿ 1969ರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣ, 47 ಪ್ರಯಾಣಿಕರ ಸಾವಿಗೆ ಕಾರಣವಾದ ಟೆಲ್ಅವೀವ್ನಲ್ಲಿ ಸ್ವಿಸ್ಏರ್ ವಿಮಾನದಲ್ಲಿ ಬಾಂಬ್ ಸ್ಫೋಟ ಪ್ರಕರಣ ಇದರಲ್ಲಿ ಪ್ರಮುಖವಾಗಿದೆ.







