ರಾಧಾಕೃಷ್ಣ ನಾಯಕ್ ಗೆ ಹಲ್ಲೆ ಆರೋಪ; ನಕಲಿ ಖಾತೆ ಪತ್ತೆ ಹಚ್ಚಿ: ಕಾಂಗ್ರೆಸ್ ಒತ್ತಾಯ

ಕಾರ್ಕಳ: ಹಿರ್ಗಾನ ನಿವಾಸಿ ರಾಧಾಕೃಷ್ಣ ನಾಯಕ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ತೇಜೋವಧೆ ಮಾಡಲಾಗಿದೆ. ಏಕಾಏಕಿ ಆರೋಪ ಹೊರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಕಾಂಗ್ರೆಸ್ ಪ್ರತಿಭಟಿಸುತ್ತದೆ. ಮೊದಲು ನಕಲಿ ಖಾತೆಯನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಿ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಹೇಳಿದರು.
ಇಲ್ಲಿನ ಬಂಡಿಮಠದ ಬಸ್‌ನಿಲ್ದಾಣದಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪ್ರತಿಭಟನೆ ಯಾರ ವಿರುದ್ಧವೂ ಅಲ್ಲ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವಾಗಿದ್ದು ಸೈನಿಕರ ಮೇಲೆ, ಸಂಸತ್ತಿನ ಮೇಲೆ ದ್ರೋಹ ಬಗೆಯುವವರನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ. ಸೈನಿಕರ ವಿರುದ್ಧ ರಾಧಾಕೃಷ್ಣ ನಾಯಕ್ ಅವಹೇಳನಕಾರಿ ಬರಹ ಬರೆದದ್ದಾದರೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು. ಕಾರ್ಕಳ ಶಾಸಕರು ಹೇಳಿಕೆ ನೀಡಿ ಒಬ್ಬ ದೇಶದ್ರೋಹಿಯ ಪರವಾಗಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ ಎಂದಿದ್ದಾರೆ. ರಾಧಾಕೃಷ್ಣ ನಾಯಕ್ ಮೇಲೆ ದೇಶದ್ರೋಹದ ಕೇಸು ದಾಖಲಾಗಿಲ್ಲ. ಶಾಸಕ ಸುನಿಲ್ ಕುಮಾರ್ ಕೇವಲ ಭ್ರಷ್ಟರು ಮಾತ್ರವಲ್ಲ ಮೂರ್ಖರೂ ಹೌದು ಎನ್ನುವುದೀಗ ಸಾಬೀತಾಗಿದೆ ಎಂದು ಆರೋಪಿಸಿದರು.
ಹೆಬ್ರಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ ಕೋಟ್ಯಾನ್ ಹಾಗೂ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ಮಾತನಾಡಿದರು. ಪ್ರತಿಭಟನೆಯ ನಂತರ ಡಿವೈಎಸ್‌ಪಿ ವಿಜಯ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಮುರಳೀ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ರಾಜ್ಯ ಯುವಕಾಂಗ್ರೆಸ್ ಮುಖಂಡ ರವಿಶಂಕರ್ ಶೇರಿಗಾರ್, ಸುಬೀತ್ ಕುಮಾರ್, ಆರೀಫ್ ಕಲ್ಲೊಟ್ಟೆ, ಪ್ರತಿಮಾ, ಯೋಗೀಶ್ ಇನ್ನ, ಕುಶ ಮೂಲ್ಯ, ಯತೀಶ್ ಕರ್ಕೇರ ಹಾಗೂ ಇತರರು ಉಪಸ್ಥಿತರಿದ್ದರು.









