ರಾಧಾಕೃಷ್ಣ ಹಿರ್ಗಾನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಹಿಂದು ಜಾಗರಣ ವೇದಿಕೆ ಒತ್ತಾಯ
ಉಡುಪಿ, ಜು. 10: ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಯೋಧರ ವಿರುದ್ಧ ಪೋಸ್ಟ್ ಹಾಕಿದ ಕಾರ್ಕಳದ ರಾಧಾಕೃಷ್ಣ ಹಿರ್ಗಾನ ಅವರನ್ನು ಪೊಲೀಸರು ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಹಿಂದು ಜಾಗರಣ ವೇದಿಕೆ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ, ಪೊಲೀಸರು ರಾಧಾಕೃಷ್ಣ ಅವರನ್ನು ಠಾಣೆಗೆ ಕರೆದು ವಿಚಾರಿಸಿದ ಕಾರಣಕ್ಕೆ ಕಾಂಗ್ರೆಸಿಗರು ಪೊಲೀಸ್ ದೌರ್ಜನ್ಯ ಎಂಬುದಾಗಿ ಬಿಂಬಿಸುತ್ತಿದ್ದಾರೆ. ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ. ಒಂದು ವೇಳೆ ಕಾಂಗ್ರೆಸಿಗರು ಈ ದೇಶದ್ರೋಹಿಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುವುದಾದರೆ, ನಾವು ಕಾರ್ಕಳದ ಪೊಲೀಸರನ್ನು ಮತ್ತು ದೇಶದ ಯೋಧರನ್ನು ಬೆಂಬಲಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆಯ ಮುಖಂಡರಾದ ಪ್ರಶಾಂತ ನಾಯ್ಕಿ, ರಾಜೇಶ್ ಉಚ್ಚಿಲ, ಪ್ರವೀಣ್ ಯಕ್ಷಿಮಠ, ರಿಕೇಶ್ ಪಾಲನ್, ಮಹೇಶ್ ಪಾಲನ್ ಉಪಸ್ಥಿತರಿದ್ದರು.





