ಬೆಂಗಳೂರು: ಏಕಕಾಲದಲ್ಲಿ 2144 ರೌಡಿಗಳ ನಿವಾಸಗಳ ಮೇಲೆ ಪೊಲೀಸರ ದಾಳಿ
ಅಪರಾಧ ಪ್ರಕರಣಗಳಲ್ಲಿ ತೊಡಗದಂತೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.10: ಅನ್ಲಾಕ್ ಬಳಿಕ ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗಿರುವ ಹಿನ್ನೆಲೆ ರಾಜಧಾನಿ ಬೆಂಗಳೂರಿನ ರೌಡಿಗಳ ನಿವಾಸಗಳ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿದ ಪೊಲೀಸರು, ವಿಚಾರಣೆ ನಡೆಸಿ, ಅಪರಾಧ ಪ್ರಕರಣಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು.
ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಂಗವಾಗಿ ಮೊದಲ ಬಾರಿಗೆ ನಗರದ 8 ವಿಭಾಗದ ಪೊಲೀಸರು ಏಕಕಾಲದಲ್ಲಿ 2144 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ 1548 ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
ಶನಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸರು ಡಿಸಿಪಿಗಳ ನೇತೃತ್ವದಲ್ಲಿ ಬೆಳಗಿನ ಜಾವ 5 ಗಂಟೆಯಲ್ಲಿ ಏಕಕಾಲದಲ್ಲಿ ರೌಡಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, 1548 ಮಂದಿ ರೌಡಿಗಳನ್ನು ವಶಕ್ಕೆ ಪಡೆದು ಆಯಾ ವಿಭಾಗದ ಠಾಣೆ ಮಟ್ಟದಲ್ಲಿ ವಿಚಾರಣೆಗೊಳಪಡಿಸಲಾಯಿತು ಎಂದರು.
ದಾಳಿ ಸಂದರ್ಭದಲ್ಲಿ 91 ಮಾರಕಾಸ್ತ್ರಗಳು, ಮೊಬೈಲ್ ಫೋನ್ಗಳು, ವಾಹನಗಳು, ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು, 12 ಕೆ.ಜಿ. ಗಾಂಜಾ ಸೇರಿದಂತೆ ನಾನಾ ರೀತಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ತಿ ಪತ್ರಗಳು ಹಾಗೂ ವಾಹನಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.
ಪ್ರಮುಖ ರೌಡಿಶೀಟರ್ ಗಳಾದ ಪಾಯ್ಸನ್ ರಾಮ, ಜೆಸಿಬಿ ನಾರಾಯಣ, ಸೈಕಲ್ ರವಿ, ಅಶೋಕಿ, ಪಾಪ, ಈಶ್ವರ್, ಕಿರಣ್ ಪಾವ್, ಮಹಾದೇವಸ್ವಾಮಿ ಸೇರಿದಂತೆ ಇನ್ನಿತರ ರೌಡಿ ಮನೆಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಳ್ಳಲಾಯಿತು ಎಂದು ವಿವರಿಸಿದರು.
ಕಳೆದೊಂದು ವರ್ಷದಿಂದ ಪ್ರಸಕ್ತ ಜೂನ್ವರೆಗೆ 31 ಮಂದಿ ರೌಡಿಗಳನ್ನು ಗೂಂಡಾ ಕಾಯಿದೆಯಡಿ ಬಂಧಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪಿಐಟಿ ಮತ್ತು ಎನ್ಡಿಪಿಎಸ್ ಕಾಯಿದೆಯಡಿ ಮೂರು ಮಂದಿಯನ್ನು ಬಂಧಿಸಲಾಗಿದೆ. ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಅಧಿಕಾರದ ಮೂಲಕ ವಿಭಾಗೀಯ ಡಿಸಿಪಿಗಳು ಭದ್ರತಾ ಕಾಯಿದೆಯಡಿ 1808 ಪ್ರಕರಣಗಳನ್ನು ದಾಖಲಿಸಿ, 1571 ಪ್ರಕರಣಗಳಲ್ಲಿ ಅಂತಿಮ ಮುಚ್ಚಳಿಕೆ ಪಡೆಯಲಾಗಿದೆ ಎಂದರು.
ಇನ್ನು ಮುಚ್ಚಳಿಕೆ ಉಲ್ಲಂಘನೆ ಮಾಡಿರುವ 28 ರೌಡಿಗಳಿಂದ ಮುಚ್ಚಳಿಕೆಗೆ ನೀಡಿದ್ದ 1.50 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜತೆಗೆ ಭದ್ರತಾ ಕಾಯಿದೆಯಡಿ ನಾಲ್ಕು ರೌಡಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಹೇಳಿದರು.
ಶನಿವಾರದ ಕಾರ್ಯಾಚರಣೆಯಲ್ಲಿ ಭಾರತದ ದಂಡ ಪ್ರಕ್ರಿಯ ಸಂಹಿತೆ ಮುಂಜಾಗ್ರತಾ ಅಡಿ 409 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾರತ ಶಸ್ತ್ರಾಸ್ತ್ರ ಕಾಯಿದೆಯಡಿ 48 ಪ್ರಕರಣಗಳನ್ನು ಮತ್ತು ಎನ್ಡಿಪಿಎಸ್ ಕಾಯಿದೆಯಡಿ 84 ಪ್ರಕರಣಗಳು, ದರೋಡೆ ಯತ್ನದಡಿ 2 ಪ್ರಕರಣಗಳಲ್ಲಿ 561 ರೌಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಮಲ್ ಪಂತ್ ವಿವರಿಸಿದರು.
ಕಪಾಳ ಮೋಕ್ಷ ಮಾಡಿದ ಪಿಐ
ಇಲ್ಲಿನ ಡಿಜೆ ಹಳ್ಳಿ ಮೈದಾನದಲ್ಲಿ ಮೈದಾನದಲ್ಲಿ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಲಾಗುತ್ತಿತ್ತು. ಈ ವೇಳೆ ಭಾರತೀನಗರ ವ್ಯಾಪ್ತಿಯ ರೌಡಿ ಶೀಟರ್ ಮುಹಮ್ಮದ್ ಸಫಾನ್ ಪೊಲೀಸರಿಗೆ ಉತ್ತರಿಸದ ಕಾರಣಕ್ಕಾಗಿ ಕೋಪಗೊಂಡ ಇನ್ಸ್ಪೆಕ್ಟರ್ ಆನಂದ್ ನಾಯ್ಕ್ ಡಿಸಿಪಿ ಸಮ್ಮುಖದಲ್ಲೇ ಕಪಾಳ ಮೋಕ್ಷ ಮಾಡಿದ ಪ್ರಸಂಗ ಜರಗಿತು.







