ಹೊಸದಿಲ್ಲಿ: 2,500 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಹೊಸದಿಲ್ಲಿ, ಜು. 9: ದಿಲ್ಲಿಯ ಫರಿದಾಬಾದ್ನ ಮನೆಯೊಂದರಿಂದ 2,500 ಕೋಟಿ ರೂಪಾಯಿ ಮೌಲ್ಯದ 354 ಕಿ.ಗ್ರಾಂ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಅಫಘಾನಿಸ್ಥಾನ, ಯುರೋಪ್ ಹಾಗೂ ದೇಶದ ಇತರ ಭಾಗಗಳಲ್ಲಿ ಹಬ್ಬಿರುವ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲದ ಬಗ್ಗೆ ಬೆಳಕು ಚೆಲ್ಲಿದೆ. ಅಧಿಕಾರಿಗಳು ಪ್ರಕರಣವನ್ನು ಮಾದಕದ್ರವ್ಯ-ಭಯೋತ್ಪಾದನೆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
‘‘ಪೊಲೀಸರು ಅಫಘಾನಿ ಪ್ರಜೆ, ಕಾಶ್ಮೀರದ ಅನಂತ್ ನಾಗ್ ನಿವಾಸಿ ಹಝರತ್ ಅಲಿ, ಪಂಜಾಬ್ ನ ಜಲಂಧರ್ನ ರಿಝ್ವಾನ್ ಅಹ್ಮದ್, ಗುರುಜೋತ್ ಸಿಂಗ್ ಹಾಗೂ ಗುರುದೀಪ್ ಸಿಂಗ್ ನನ್ನು ಬಂಧಿಸಿದ್ದಾರೆ. ಈ ಜಾಲ ಅಫಘಾನಿಸ್ತಾನ, ಯುರೋಪ್ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಬ್ಬಿರುವ ಸಾಧ್ಯತೆ ಇದೆ’’ ಎಂದು ದಿಲ್ಲಿ ಪೊಲೀಸ್ ವಿಶೇಷ ಸೆಲ್ ನ ವಿಶೇಷ ಆಯುಕ್ತ ನೀರಜ್ ಠಾಕೂರ್ ತಿಳಿಸಿದ್ದಾರೆ. ತನಿಖೆ ವೇಳೆ ಈ ಹೆರಾಯಿನ್ ಅನ್ನು ಗೋಣಿ ಚೀಲ ಹಾಗೂ ಪೆಟ್ಟಿಗೆಯಲ್ಲಿ ಇರಾನ್ ನ ಚಬ್ಹಾರ್ ಬಂದರಿನಿಂದ ಮಹಾರಾಷ್ಟ್ರದ ಮುಂಬೈ ಮೂಲಕ ಜವಾಹರ್ ಲಾಲ್ ನೆಹರೂ ಬಂದರಿಗೆ ರವಾನಿಸಲಾಗಿದೆ ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.





