ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ: ಅರ್ಜೆಂಟೀನ ಚಾಂಪಿಯನ್

ರಿಯಾ ಡೆ ಜೆನೈರೊ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಏಂಜೆಲ್ ಡಿ ಮರಿಯಾ ಹೊಡೆದ ಏಕೈಕ ಗೋಲಿನಿಂದ ಬ್ರೆಝಿಲ್ ತಂಡವನ್ನು ಮಣಿಸಿದ ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಪಡೆ ಪ್ರಶಸ್ತಿ ಜಯಿಸಿದೆ.
ಇದರೊಂದಿಗೆ ಪ್ರಮುಖ ಟ್ರೋಫಿಗಾಗಿ ಅರ್ಜೆಂಟೀನ 28 ವರ್ಷಗಳ ಸುಧೀರ್ಘ ಕಾಯುವಿಕೆ ಅಂತ್ಯವಾಗಿದೆ. ಅಂತೆಯೇ ಬ್ರೆಝಿಲ್ ತಂಡದ ತವರಿನಲ್ಲಿ 2500 ದಿನಗಳ ಅಜೇಯ ಓಟ ಕೂಡಾ ಮುಕ್ತಾಯವಾಗಿದೆ. 1993ರ ಕೋಪಾ ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ್ದೇ ಅರ್ಜೆಂಟೀನ ಪಾಲಿಗೆ ಕೊನೆಯ ಪ್ರಮುಖ ಪ್ರಶಸ್ತಿಯಾಗಿತ್ತು.
ತವರಿನಲ್ಲಿ ನಡೆದ ಕೋಪಾ ಅಮೆರಿಕ ಕಪ್‌ನ ಆರು ಟೂರ್ನಿಗಳಲ್ಲಿ ಇದೇ ಮೊದಲ ಬಾರಿಗೆ ಕಪ್ ಗೆಲ್ಲಲು ಬ್ರೆಝಿಲ್ ವಿಫಲವಾಯಿತು.
22ನೇ ನಿಮಿಷದಲ್ಲಿ ಡಿ ಮರಿಯಾ ಗಳಿಸಿದ ಗೋಲಿನಿಂದಾಗಿ ಅರ್ಜೆಂಟೀನ ಗೆಲ್ಲಲು ಸಾಧ್ಯವಾಯಿತು. ಆಟ ಮುಕ್ತಾಯಗೊಳ್ಳಲು ಎರಡು ನಿಮಿಷ ಇರುವಾಗ ಮೆಸ್ಸಿ ಗೋಲು ಗಳಿಸುವ ಅವಕಾಶವನ್ನು ವ್ಯರ್ಥಪಡಿಸಿಕೊಂಡರು.
ಈ ಜಯದೊಂದಿಗೆ ಅರ್ಜೆಂಟೀನ 15ನೇ ಬಾರಿ ಕೋಪಾ ಅಮೆರಿಕ ಕಪ್ ಗೆದ್ದ ದಾಖಲೆಯನ್ನು ಸರಿಗಟ್ಟಿತು. ಮೆಸ್ಸಿಗೆ ಇದು ಚೊಚ್ಚಲ ಕೋಪಾ ಕಿರೀಟವಾಗಿದೆ.