ಜುಲೈ 21ರಂದು ರಾಜ್ಯಾದ್ಯಂತ ಬಕ್ರೀದ್ ಆಚರಣೆ

ಫೈಲ್ ಚಿತ್ರ
ಬೆಂಗಳೂರು, ಜು.11: ದುಲ್ ಹಜ್ಜ್ ಮಾಸದ ಚಂದ್ರ ದರ್ಶನವು ಜು.11ರಂದು ರವಿವಾರ ದೇಶದ ವಿವಿಧ ಭಾಗಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಜು.21ರಂದು ರಾಜ್ಯಾದ್ಯಂತ ಬಕ್ರೀದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಮರ್ಕಝಿ ರೂಯತೆ ಹಿಲಾಲ್ ಕಮಿಟಿ(ಚಂದ್ರ ದರ್ಶನ ಸಮಿತಿ)ಯ ಸದಸ್ಯ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ರವಿವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ದಾರೂಲ್ ಔಕಾಫ್ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ಚಂದ್ರ ದರ್ಶನ ಸಮಿತಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಂದ್ರದರ್ಶನ ಕಂಡು ಬಂದಿಲ್ಲ. ಆದರೆ, ದೇವ್ಬಂದ್, ತಮಿಳುನಾಡು, ಜಾರ್ಖಂಡ್, ಕೊಲ್ಕತ್ತಾ, ಪಲಮನೇರ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಚಂದ್ರದರ್ಶನವಾಗಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜು.21ರಂದು ಬಕ್ರೀದ್ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮಕ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಹಝ್ರತ್ ಮೌಲಾನ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಹಝ್ರತ್ ಮೌಲಾನ ಅಬ್ದುಲ್ ಖದೀರ್ ವಾಜೀದ್, ಹಝ್ರತ್ ಮೌಲಾನ ಏಜಾಝ್ ಅಹ್ಮದ್ ನದ್ವಿ, ಹಝ್ರತ್ ಖಾರಿ ಮುಹಮ್ಮದ್ ಝುಲ್ಫಿಖಾರ್ ರಝಾ ನೂರಿ ಹಾಗೂ ಹಝ್ರತ್ ಮೌಲಾನ ಸೈಯ್ಯದ್ ಮನ್ಝೂರ್ ರಝಾ ಆಬಿದಿ ಪಾಲ್ಗೊಂಡಿದ್ದರು.







