ಡೀಮ್ಡ್ ಅರಣ್ಯದಿಂದ ಕೈಬಿಡಬೇಕಾದ ಭೂಮಿಯ ಪಟ್ಟಿ ಸಲ್ಲಿಸಲು ಸಚಿವ ಅರವಿಂದ ಲಿಂಬಾವಳಿ ಸೂಚನೆ
ಉಡುಪಿ, ಜು.11: ರಾಜ್ಯದಲ್ಲಿ ಒಟ್ಟು 9,91,000 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಉಡುಪಿ ಜಿಲ್ಲೆಯಲ್ಲಿ 62,000 ಹೆಕ್ಟೇರ್ ಭೂಮಿ ಡೀಮ್ಡ್ ವ್ಯಾಪ್ತಿಗೆ ಸೇರಿದೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳೊಳಗೆ ರಾಜ್ಯದ ಡೀಮ್ಡ್ ಅರಣ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅವರು ಕಾರ್ಕಳ ಮಂಜುನಾಥ ಪೈ ಸಬಾಂಗಣದಲ್ಲಿ ಡೀವ್ಡ್ ಅರಣ್ಯ ಸಮಸ್ಯೆಯ ಕುರಿತಂತೆ ರವಿವಾರ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಜನ ವಾಸ್ತವ್ಯದ ಪ್ರದೇಶ ಹಾಗೂ ಕೃಷಿ ಚಟುವಟಿಕೆಯಿಂದ ಕೂಡಿದ ಪ್ರದೇಶವನ್ನು ಕೈಬಿಡುವಂತೆ ಸುಪ್ರೀಂಕೋರ್ಟ್‌ಗೆ ಅಪಿಧಾವಿತ್ ಸಲ್ಲಿಸಲಾಗುವುದು. ಅದಕ್ಕೆ ಪೂರ್ವಭಾವೀಯಾಗಿ ಪ್ರತಿ ಗ್ರಾಮಗಳಲ್ಲೂ ಅರಣ್ಯಕ್ಕೆ ಪೂರಕವಾಗುವ ಭೂಮಿಯನ್ನು ಗುರುತಿಸಿ, ಡೀಮ್ಡ್ ಅರಣ್ಯ ದಿಂದ ಕೈ ಬಿಡಬೇಕಾದ ಭೂಮಿಯ ಕುರಿತು ಪಟ್ಟಿ ಸಲ್ಲಿಸುವಂತೆ ಶಾಸಕರಿಗೆ ಸೂಚಿಸಲಾಗುವುದು. ನಮ್ಮ ಸರಕಾರದ ಅವಧಿಯಲ್ಲೇ ಈ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.
ಇದರೊಂದಿಗೆ ಪ್ರಾಣಿಗಳ ಸಂರಕ್ಷಣೆಯೂ ಆಗಬೇಕಾಗಿದೆ. ಕಾಡುಗಳಲ್ಲಿ ಫಲಭರಿತ ವೃಕ್ಷಗಳನ್ನು ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾ ಗಿದೆ. ಪರಿಸರಕ್ಕೆ ಮಾರಕವಾಗಿರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳ ನಿರ್ಮೂಲನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸರಕಾರದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಈ ಹಿಂದೆ ಅವೈಜ್ಞಾನಿಕ ಸರ್ವೇಯ ಮೂಲಕ ಡೀಮ್ಡ್ ಪಟ್ಟಿಗೆ ಸರ್ವೇ ನಂಬರ್‌ಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಇದರ ಪರಿಣಾಮ ಕಾರ್ಕಳ ದಲ್ಲಿ 3595 ಅರ್ಜಿ 94ಸಿ ಅಡಿಯಲ್ಲಿ, 1177 ಅರ್ಜಿ 94ಸಿಸಿ ಅಡಿಯಲ್ಲಿ, ನಮೂನೆ-53ರಡಿಯಲ್ಲಿ 2608 ಅರ್ಜಿಗಳು ವಿಲೇವಾಗದೆ ಬಾಕಿ ಉಳಿದಿವೆ. ಒಟ್ಟು 6,616 ಫಲಾನುಭವಿಗಳು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು, ಡೀಮ್ಡ್ ಅಡ್ಡಿಯಿಂದ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಜೊತೆ ಅಭಿವೃದ್ದಿ ಚಟುವಟಿಕೆ ಗಳಿಗೂ ತೊಂದರೆ ಯಾಗುತ್ತಿದ್ದು, ಒಟ್ಟು 42 ಯೋಜನೆಗಳು ಸೂಕ್ತ ಜಾಗವಿಲ್ಲದೆ ಬಾಕಿ ಉಳಿದಿವೆ ಎಂದರು.
ಇದೇ ವೇಳೆ ಸಾರ್ವಜನಿಕರು ಡೀಮ್ಡ್ ಸಮಸ್ಯೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡರು. ಇದೇ ಸಂದರ್ಭದಲ್ಲಿ ಪುನರ್ವಸತಿ ಯೋಜನೆಯಡಿ ಪರಿಹಾರಧನ ವಿತರಣೆ ಹಾಗೂ ಇನ್ನಿತರ ಸವಲತ್ತುಗಳನ್ನು ಸಚಿವರು ಫಲಾನುಭವಿಗಳಿಗೆ ವಿತರಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಬಿಜೂರು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟ್ಯಾಗೊ, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೆಟಾಲ್ಕರ್‌ಮ ಕುಂದಾಪುರ ವಿಱಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕಾರ್ಕಳ ವನ್ಯಜೀವಿ ವಿಭಾಗದ ರುಥ್ರೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹಿರಿಯ ನ್ಯಾಯವಾದಿ ಎಂ.ಕೆ.ವಿಜಯಕುಮಾರ್, ಪುರಸಭೆ ಅಧ್ಯಕ್ಷೆ ಸುಮಾ ಕೇಶ್ ಉಪಸ್ಥಿತರಿದ್ದರು.
ಉದಯ ಎಸ್.ಕೋಟ್ಯಾನ್ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.







