ನಾನಾಗಲಿ ನನ್ನ ಮಗನಾಗಲಿ ಪಕ್ಷೇತರರಾಗಿ ಎಲ್ಲೇ ಸ್ಪರ್ಧೆ ಮಾಡಿದರೂ ಜಯಗಳಿಸುತ್ತೇವೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಜು.11: ಜನರ ಅಭಿಪ್ರಾಯ ಪಡೆಯದೆ ನಾನು ಯಾವುದೇ ತೀರ್ಮಾನ ಮಾಡುವುದಿಲ್ಲ, ಆದರೂ ನಾನಾಗಲಿ, ನನ್ನ ಮಗ ಹರೀಶ್ ಗೌಡ ಎಲ್ಲೇ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೂ ಜಯಗಳಿಸುವ ವಿಶ್ವಾಸವಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು ಮನೆಗೆ ಬಂದು ಮುಂದೆ ಏನು ಮಾಡಬೇಕು, ಯಾವ ರಾಜಕೀಯ ತೀರ್ಮಾನ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಪಕ್ಷವೇ ಬೇಕಾಗಿಲ್ಲ. ಸ್ವತಂತ್ರವಾಗಿ ನಿಂತರೆ ನಾವು ಗೆಲ್ಲಿಸುತ್ತೇವೆಂದು ಹೇಳುತ್ತಿದ್ದಾರೆ. ಜನರ ವಿಶ್ವಾಸ, ಧೈರ್ಯ ನೋಡಿದರೆ ಎಲ್ಲಾದರೂ ನಿಂತು ಗೆಲ್ಲುವ ನಂಬಿಕೆ ಇದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ನನ್ನ ಮಗ ಹರೀಶ್ ಗೌಡ ಎಲ್ಲಾದರೂ ನಿಂತು ಗೆಲ್ಲುತ್ತಾನೆ. ಅದು ಹುಣಸೂರು, ಕೆ.ಆರ್.ನಗರ, ಚಾಮರಾಜ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾನೆ ಎಂದು ಎಂದು ತಮ್ಮ ವಿರೋಧಿಗಳಿಗೆ ನೇರವಾದ ಸವಾಲು ಹಾಕಿದರು.
ಎರಡು ವರ್ಷದಿಂದ ಜೆಡಿಎಸ್ ನ ಸಭೆ, ಕಾರ್ಯಕ್ರಮಗಳಿಗೆ ಭಾಗಿಯಾಗಿಲ್ಲ. ಬೇರೆ ಪಕ್ಷಕ್ಕೂ ಹೋಗಿಲ್ಲ. ಗುರುತಿಸಿಕೊಳ್ಳದೆ ನನ್ನ ಪಾಡಿಗೆ ನಾನಿದ್ದೇನೆ. 17ಜನ ಶಾಸಕರು ಬಿಜೆಪಿಗೆ ಹೋದಾಗಲೇ ನಾನು ಹೋಗಿ ಮಂತ್ರಿ ಆಗಬಹುದಾಗಿತ್ತು. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಸಮಾವೇಶ ಮಾಡಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಮಾಡುತ್ತೇನೆಂದು ಹೇಳಿ ಸಿಎಂ ಮಾಡಿದ್ದೇವೆ. ಅವರನ್ನು ಇಳಿಸಬಾರದೆಂದು ಮನಸ್ಸು ಒಪ್ಪಲಿಲ್ಲ ಎಂದು ಹೇಳಿದರು







