ಶ್ರೀನಗರ: 60 ವರ್ಷಗಳ ಹಿಂದೆಯೇ ಮೃತಪಟ್ಟ ವ್ಯಕ್ತಿಗೆ ಲಸಿಕೆಯ ಎರಡೂ ಡೋಸ್ ನೀಡಿದ ಕೋವಿನ್ !

ಫೋಟೊ ಕೃಪೆ: The Wire
ಶ್ರೀನಗರ, ಜು.11: ಕೋವಿಡ್ ಲಸಿಕೆಗಾಗಿರುವ ಕೇಂದ್ರ ಸರಕಾರದ ಕೋವಿನ್ ವೆಬ್ಸೈಟ್ ಶ್ರೀನಗರದ ಅಲಿ ಮುಹಮ್ಮದ್ ಭಟ್ ಎನ್ನುವವರ ಹೆಸರನ್ನು ನೋಂದಣಿ ಮಾಡಿಕೊಂಡಿದೆ,ಮಾತ್ರವಲ್ಲ ಅವರಿಗೆ ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನೂ ನೀಡಿದೆ. ಚೋದ್ಯವೆಂದರೆ ಈ ವ್ಯಕ್ತಿ 60 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.
ಕೋವಿನ್ ವೆಬ್ಸೈಟ್ನಲ್ಲಿ ಆರು ದಶಕಗಳ ಹಿಂದೆ ನಿಧನರಾಗಿರುವ ತನ್ನ ಅಜ್ಜ ಭಟ್ ಪ್ರೊಫೈಲ್ ಏಕಾಏಕಿ ಕಾಣಿಸಿಕೊಂಡಿರುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ನಗರದ ಖನ್ಯಾರ್ ನಿವಾಸಿ ಮುದಸ್ಸಿರ್ ಸಿದ್ದಿಕ್ (33),‘ತಿಂಗಳ ಹಿಂದೆ ನಾನು ಕೋವಿಡ್-19ಕ್ಕೆ ಪಾಸಿಟಿವ್ ಆಗಿದ್ದೆ, ಹೀಗಾಗಿ ಲಸಿಕೆಯ ಮೊದಲ ಡೋಸ್ ಪಡೆಯಲು ನನ್ನ ಹೆಸರನ್ನು ಇತ್ತೀಚಿಗಷ್ಟೇ ಕೋವಿನ್ನಲ್ಲಿ ನೋಂದಾಯಿಸಿದ್ದೆ. ಜೊತೆಗೆ ನನ್ನ ನಂಬರ್ ಮೂಲಕ ಕುಟುಂಬದ ಸದಸ್ಯರೂ ತಮ್ಮ ಹೆಸರುಗಳನ್ನೂ ನೋಂದಾಯಿಸಿಕೊಂಡಿದ್ದಾರೆ. ನಮ್ಮೆಲ್ಲರ ಸ್ಟೇಟಸ್ ರಿಪೋರ್ಟ್ಗಳು ಒಂದೇ ಪುಟದಲ್ಲಿವೆ ’ಎಂದು ತಿಳಿಸಿದರು.
ಆದರೆ ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಅಜ್ಜ ಅಲಿ ಮುಹಮ್ಮದ್ ಭಟ್ ಅವರ ಹೆಸರೂ ಸೇರಿಕೊಂಡಿರುವುದು ಮುದಸ್ಸಿರ್ಗೆ ಅಚ್ಚರಿಯನ್ನುಂಟು ಮಾಡಿದೆ. ‘ಅಜ್ಜ 60 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ನಾನು ಅವರನ್ನು ನೋಡಿಯೇ ಇಲ್ಲ. ಅವರು ಹೇಗೆ ಮತ್ತು ಯಾವಾಗ ನಿಧನರಾಗಿದ್ದರು ಎಂಬ ನನ್ನ ತಂದೆಗೂ ಹೆಚ್ಚಿನ ಮಾಹಿತಿಯಿಲ್ಲ ’ಎಂದು ಮುದಸ್ಸಿರ್ ತಿಳಿಸಿದರು.





