ಕರಾವಳಿಯಲ್ಲಿ ಮುಂದುವರಿದ ಮಳೆ: ಹಲವೆಡೆ ಮರ-ವಿದ್ಯುತ್ ಕಂಬ ಧರಾಶಾಹಿ
ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ

ಮಂಗಳೂರು, ಜು.11: ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಜು.15ರವರೆಗೆ ವ್ಯಾಪಕ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ರವಿವಾರವೂ ತನ್ನ ಆರ್ಭಟವನ್ನು ಮುಂದುವರಿಸಿದೆ. ಜಿಲ್ಲೆಯ ವಿವಿಧೆಡೆ ಗಿಡ-ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಹಲವೆಡೆ ಮನೆಗಳಿಗೆ ಹಾನಿ ಸಂಭವಿದೆ. ಅಲ್ಲಲ್ಲಿ ಆಸ್ತಿ-ಪಾಸ್ತಿ ನಷ್ಟವಾದ ಬಗ್ಗೆ ವರದಿ ಯಾಗಿದೆ. ಘಟ್ಟದ ತಪ್ಪಲಿನ ಭಾಗದಲ್ಲಿ ಮಳೆ ದಿನವಿಡೀ ಸುರಿದಿದ್ದು, ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಉಳ್ಳಾಲದ ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಸಂಭವಿಸಿದೆ. ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ, ಕರಾವಳಿಯಲ್ಲಿ ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅತಿವೃಷ್ಟಿಯಿಂದಾಗ ಬಹುದಾದ ಹಾನಿ ತಪ್ಪಿಸಲು ತಗ್ಗು ಪ್ರದೇಶಗಳಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ರವಿವಾರ ಬಹುತೇಕ ಸಮಯ ಉತ್ತಮ ಮಳೆಯೊಂದಿಗೆ ಭಾರೀ ಗಾಳಿಯೂ ಇತ್ತು. ಜಿಲ್ಲೆಯ ಕೆಲವೆಡೆ ಗಿಡ-ಮರಗಳು ಧರಾಶಾಹಿಯಾಗಿವೆ. ಎರಡು ಕಡೆ ಕಂಪೌಂಡ್ ಹಾನಿಯಾಗಿದೆ. ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಬೋವಿಕೇರಿಯ ವಾಸು ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ.
ಗುರುಪುರ ಹೋಬಳಿ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿ ಬೇಟೆಮಾರು ಎಂಬಲ್ಲಿ ರಸ್ತೆಗೆ ಮರ ಬಿದ್ದಿದ್ದು, ತೆರವು ಕಾರ್ಯ ನಡೆಯುತ್ತಿದೆ. ಘಟನೆ ಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜಿಲ್ಲೆಯ ವಿವಿಧ ಭಾಗದಲ್ಲಿ ಕೃಷಿ ಭೂಮಿಗೂ ಮಳೆನೀರು ನುಗ್ಗಿದೆ.
ಕಡಲು ಪ್ರಕ್ಷುಬ್ಧ: ಕಳೆದ ಮೂರು ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆಯ ಜೊತೆಗೆ ಭಾರೀ ಗಾಳಿಯೂ ಬೀಸುತ್ತಿರುವುದರಿಂದ ಕಡಲು ಪ್ರಕ್ಷುಬ್ಧ ಗೊಂಡಿದೆ. ಪರಿಣಾಮ ಉಳ್ಳಾಲದ ಅಲ್ಲಲ್ಲಿ ಕಡಲ್ಕೊರೆತ ಶುರುವಾಗಿದೆ. ಮುಂದಿನ ನಾಲ್ಕು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವು ದರಿಂದ ಕಡಲ ತೀರದಲ್ಲಿ ವಾಸಿಸುವವರಿಗೆ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ 40-50ರಿಂದ 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ 2.5-3.7ಮೀ. ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಏಳುವ ಸಾಧ್ಯತೆಯಿದ್ದು, ತೀರ ಪ್ರದೇಶದಲ್ಲಿ ವಾಸಿಸುತ್ತಿರುವವರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಪ್ರವಾಸಿಗರಿಗೂ ಸಮುದ್ರಕ್ಕಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ.
ಮಳೆ ಹೆಚ್ಚಾಗಿದ್ದರಿಂದ ರವಿವಾರ ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ರವಿವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 50.4 ಮಿ.ಮೀ. ಮಳೆ ಸುರಿದಿದೆ. ಇಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದೆ. ಮಂಗಳೂರು ನಗರದಲ್ಲೂ ಬಹುತೇಕ ಅಂಗಡಿಗಳು ಬಂದ್ ಆಗಿದ್ದು, ಬೆರಳೆಣಿಕೆಯ ವಾಹನಗಳು ಸಂಚರಿಸಿದವು.
ಜು.15ರವರೆಗೆ ಭಾರೀ ಮಳೆ: ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದಾಗಿ ಕರ್ನಾಟಕ ಕರಾವಳಿ ಭಾಗದಲ್ಲಿ ಜು.15ರವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ರಾಜ್ಯ ನಿರ್ದೇಶಕ ಹಾಗೂ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.










