ಪತ್ರಕರ್ತನನ್ನು ಥಳಿಸಿದ ಐಎಎಸ್ ಅಧಿಕಾರಿ ಬಾರಾಬಂಕಿ ಮಸೀದಿಯ ʼವಿವಾದಾತ್ಮಕ ಧ್ವಂಸʼ ಪ್ರಕ್ರಿಯೆಯಲ್ಲೂ ಭಾಗಿ: ವರದಿ

Photo: Theprint.in
ಲಕ್ನೋ ಉತ್ತರಪ್ರದೇಶದ ಉನ್ನಾವೋದ ಬ್ಲಾಕ್ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ವೀಡಿಯೋ ಪತ್ರಕರ್ತರೋರ್ವರು ಚಿತ್ರೀಕರಣ ನಡೆಸುತ್ತಿದ್ದ ವೇಳೆ ಐಎಎಸ್ ಅಧಿಕಾರಿಯೋರ್ವರು ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಅಧಿಕಾರಿಯನ್ನು ದಿವ್ಯಾಂಶು ಪಟೇಲ್ ಎಂದು ಗುರುತಿಸಲಾಗಿದ್ದು, ಅವರು ಈ ಹಿಂದೆಯೂ ವಿವಾದಕ್ಕೀಡಾಗಿದ್ದರು ಎಂದು THEPRINT.IN ವರದಿ ಮಾಡಿದೆ.
ಮೇ ತಿಂಗಳಲ್ಲಿ, ಬಾರಾಬಂಕಿಯ 2017 ರ ಬ್ಯಾಚ್ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿದ್ದ ದಿವ್ಯಾಂಶು ಪಟೇಲ್, ನಗರದ ಮಸೀದಿಯನ್ನು ವಿವಾದಾತ್ಮಕವಾಗಿ ನೆಲಸಮಗೊಳಿಸುವ ಆದೇಶವನ್ನು ಜಾರಿಗೊಳಿಸಿದ್ದರು. ಮಸೀದಿಯು ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಆಸ್ತಿಯಾಗಿರುವುದರಿಂದ ಧ್ವಂಸಗೊಳಿಸುವಿಕೆಯು "ಕಾನೂನಿಗೆ ವಿರುದ್ಧವಾಗಿದೆ" ಎಂದು ಮುಸ್ಲಿಂ ಸಂಘ ಸಂಸ್ಥೆಗಳು ಹೇಳಿದ್ದವು.
ಈ ಬೆಳವಣಿಗೆಯ ನಂತರ, ಅವರನ್ನು ಉನ್ನಾವೊದಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಆಗಿ ಪ್ರಸ್ತುತ ಹುದ್ದೆಗೆ ವರ್ಗಾಯಿಸಲಾಯಿತು. ಈ ವರದಿಯ ಕುರಿತು ಪ್ರತಿಕ್ರಿಯಿಸಲು ʼದಿ ಪ್ರಿಂಟ್ʼ ಪಟೇಲ್ ಅವರನ್ನು ಅವರ ಫೋನ್ ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಅದನ್ನು ತಲುಪಲಾಗಲಿಲ್ಲ ಹಾಗೂ ಉನ್ನಾವೊ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆರ್. ಕುಲಕರ್ಣಿ ಅವರೂ ಸಂಪರ್ಕಕ್ಕೆ ದೊರಕಲಿಲ್ಲ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್, "ಈ ಘಟನೆಯ ಕುರಿತಾದಂತೆ ಸರ್ಕಾರವು ವರದಿ ಕೋರಿದೆ" ಎಂದು ತಿಳಿಸಿದ್ದಾರೆ. “ಈ ಕುರಿತು ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ನಿಂದ ವಿವರವಾದ ವರದಿಯನ್ನು ಸರ್ಕಾರ ಕೇಳಿದೆ. ಅದರ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ”ಎಂದು ಸೆಹಗಲ್ ಹೇಳಿದ್ದಾರೆ.







