ಬೆಂಗಳೂರು: ಸರಣಿ ಅಪಘಾತದಲ್ಲಿ ನಾಲ್ವರಿಗೆ ಗಾಯ

ಬೆಂಗಳೂರು, ಜು.11: ಸರಗಳ್ಳತನ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲು ಪೊಲೀಸರು ಹೋದಾಗ ಎರಡು ಅಪಘಾತಗಳು ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ರವಿವಾರ ಮುಂಜಾನೆ ಸರ್ಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಂಜುಳಾ ಅವರ ಚಿನ್ನದ ಸರವನ್ನು ಬೈಕ್‍ನಲ್ಲಿ ಬಂದ ಇಬ್ಬರು ಕಸಿದಿದ್ದಾರೆ. ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ 112 ಪೆಟ್ರೋಲಿಂಗ್ ವಾಹನವು ದುಷ್ಕರ್ಮಿಗಳನ್ನು ಬೆನ್ನಟ್ಟಿದೆ.
ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ವೇಗವಾಗಿ ಬಂದ ದುಷ್ಕರ್ಮಿಗಳು ಬುರಗುಂಟೆಯಲ್ಲಿ ಭದ್ರತಾ ಸಿಬ್ಬಂದಿಯಾದ ಕಮಲ್ ಮೌತ್ ಎನ್ನುವವರನ್ನು ಬೈಕ್ ಗುದ್ದಿಸಿ ಬೀಳಿಸಿದ್ದಾರೆ. ಆ ವೇಳೆ ಕಮಲ್ ಮೌತ್ ಗಾಯಗೊಂಡರೂ ದುಷ್ಕರ್ಮಿಗಳು ಓಡಿಹೋದರು ಎಂದು ತಿಳಿದುಬಂದಿದೆ.
ಪೊಲೀಸರು ಮೌತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಅತ್ತಿಬೆಲೆ -ಸರ್ಜಾಪುರ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಯಾವುದೇ ಸೂಚನೆ ಇಲ್ಲದೆ ಢಿಕ್ಕಿ ಹೊಡೆಯುವಂತೆ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗುತ್ತಿದೆ.





