ಲಕ್ನೋದಲ್ಲಿ ಅಲ್-ಕೈದಾ ಜಾಲ ಭೇದಿಸಿದ ಉ.ಪ್ರ.ಎಟಿಎಸ್: ಇಬ್ಬರು ಉಗ್ರರ ಬಂಧನ

ಲಕ್ನೋ, ಜು.11: ಭಾರೀ ಭಯೋತ್ಪಾದಕ ದಾಳಿಯೊಂದರ ಸಂಚನ್ನು ರವಿವಾರ ಇಲ್ಲಿ ವಿಫಲಗೊಳಿಸಿರುವ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಅಲ್-ಕೈದಾ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿದೆ.
ಲಕ್ನೋದ ಕಾಕೋರಿ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಅಲ್-ಕೈದಾದ ಅನ್ಸಾರ್ ಘಝ್ವಾತ್-ಅಲ್-ಹಿಂದ್ ಗೆ ಸೇರಿದ ಉಗ್ರರಾದ ಮಿನ್ಹಾಝ್ ಅಹ್ಮದ್ ಮತ್ತು ಮುಸೀರುದ್ದೀನ್ ಅವರನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿಪಿ ಪ್ರಶಾಂತ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ಪೇಷಾವರ, ಕ್ವೆಟ್ಟಾದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಅಹ್ಮದ್ ಮತ್ತು ಮುಸೀರುದ್ದೀನ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಲಕ್ನೋ ಮತ್ತು ಕಾನ್ಪುರದಲ್ಲಿಯ ಅವರ ಸಹಚರರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಉ.ಪ್ರದೇಶದಲ್ಲಿಯ ಅಲ್ ಕೈದಾ ಜಾಲದ ಮುಖ್ಯಸ್ಥ ಉಮರ್ ಹಲ್ಮಂಡಿಯ ಸೂಚನೆಗಳ ಮೇರೆಗೆ ಬಂಧಿತರು ತಮ್ಮ ಸಹಚರರೊಂದಿಗೆ ಸೇರಿಕೊಂಡು ಆ.15ರಂದು ರಾಜ್ಯದ ವಿವಿಧ ನಗರಗಳಲ್ಲಿ, ವಿಶೇಷವಾಗಿ ಲಕ್ನೋದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಪ್ರಮುಖ ಸ್ಥಳಗಳು, ಸ್ಮಾರಕಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಮತ್ತು ಮಾನವ ಬಾಂಬ್ಗಳನ್ನು ಬಳಸಲೂ ಅವರು ಉದ್ದೇಶಿಸಿದ್ದರು. ಇದಕ್ಕಾಗಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದರು. ಈ ಉಗ್ರರ ಸಹಚರರ ಬಂಧನಕ್ಕಾಗಿ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಕುಮಾರ್ ತಿಳಿಸಿದರು.







