ಬೆಲ್ಜಿಯಂ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯಲ್ಲಿ ವೈರಸ್ ನ ಎರಡು ಪ್ರಭೇದ ಪತ್ತೆ

ಪ್ಯಾರಿಸ್, ಜು.11: ಬೆಲ್ಜಿಯಂನಲ್ಲಿ ಕೋವಿಡ್19ನಿಂದಾಗಿ ಮೃತಪಟ್ಟ 90 ವರ್ಷದ ಮಹಿಳೆಯು ಅಲ್ಫಾ ಹಾಗೂ ಬೀಟಾ ಎಂಬ ಕೊರೋನಾ ವೈರಸ್ನ ಎರಡು ಪ್ರಭೇದಗಳಿಂದ ಸೋಂಕಿತರಾಗಿದ್ದಾರೆಂದು ಸಂಶೋಧಕರು ರವಿವಾರ ತಿಳಿಸಿದ್ದಾರೆ. ಒಂದೇ ವ್ಯಕ್ತಿಯಲ್ಲಿ ಕೊರೋನ ವೈರಸ್ನ ಎರಡು ಪ್ರಭೇದಗಳು ಪತ್ತೆಯಾಗುವುದು ಅಪರೂಪದ ವಿದ್ಯಮಾನವಾದರೂ, ಅದನ್ನು ಕಡೆಗಣಿಸುವ ಹಾಗಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಸಿಕೀಕರಣಕ್ಕೊಳಗಾಗಿರದ ಈ ಮಹಿಳೆ ಏಕಾಂಗಿಯಾಗಿ ವಾಸವಾಗಿದ್ದರು ಹಾಗೂ ಮನೆಯಲ್ಲಿಯೇ ನರ್ಸಿಂಗ್ ಆರೈಕೆ ಪಡೆಯುತ್ತಿದ್ದರು. ಕಳೆದ ಮಾರ್ಚ್ನಲ್ಲಿ ಮನೆಯಲ್ಲಿ ಆಯತಪ್ಪಿ ಬಿದ್ದ ಬಳಿಕ ಅವರನ್ನು ಬೆಲ್ಜಿಯಂನ ನಗರವಾದ ಆಲಾಸ್ಟ್ನಲ್ಲಿರುವ ಓಎಲ್ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಅವರು ಕೋವಿಡ್ ಸೋಂಕಿತರಾಗಿರುವುದು ಆ ದಿನವೇ ದೃಢಪಟ್ಟಿತ್ತು.
ಆಕೆಯ ಆಮ್ಲಜನಕದ ಮಟ್ಟವು ಪ್ರಾರಂಭಿಕ ಹಂತದಲ್ಲಿ ಉತ್ತಮವಾಗಿತ್ತಾರೂ, ಆನಂತರ ಆಕೆಯ ಪರಿಸ್ಥಿತಿ ಹದಗೆಟ್ಟು ಐದು ದಿನಗಳ ಬಳಿಕ ಆಕೆ ಕೊನೆಯಸಿರೆಳೆದಿದ್ದಳು. ಆಕೆಯ ಅಲ್ಫಾ ಹಾಗೂ ಬೇಟಾ ಪ್ರಭೇದದ ವೈರಸ್ಗಳಿಂದ ಸೋಂಕಿತರಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆಲ್ಫಾ ಪ್ರಭೇದದ ವೈರಸ್ಗೆ ಬ್ರಿಟನ್ ಮೂಲವಾಗಿದ್ದರೆ, ಬೀಟಾ ವೈರಸ್ ದ.ಆಫ್ರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.
ಅಲ್ಫಾ ಹಾಗೂ ಬೀಟಾ ಪ್ರಭೇದದ ವೈರಸ್ಗಳೆರಡೂ ಬೆಲ್ಜಿಯಂನಲ್ಲಿ ಆ ಸಮಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದವು. ಹೀಗಾಗಿ ವೃದ್ಧೆಗೆ ಇಬ್ಬರು ವಿಭಿನ್ನ ವ್ಯಕ್ತಿಗಳಿಂದ ಎರಡು ವಿಭಿನ್ನ ವೈರಸ್ಗಳ ಸೋಂಕು ತಗಲಿರುವ ಸಾಧ್ಯತೆಯಿದೆಯೆಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಬೆಲ್ಜಿಯಂನ ಓಎಲ್ವಿ ಆಸ್ಪತ್ರೆಯ ಅಣ್ವಿಕ (ಮಾಲೆಕ್ಯುಲರ್) ಜೀವಶಾಸ್ತ್ರಜ್ಞ ಆ್ಯನ್ ವಂಕಿರ್ಬರ್ಗೆನ್ ತಿಳಿಸಿದ್ದಾರೆ.





