ಆಹಾರ ಧಾನ್ಯ ಕಿಟ್ ವಿತರಣೆಯಲ್ಲಿ ಅವ್ಯವಹಾರ ಆರೋಪ: ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರ ಧರಣಿ

ಮಂಗಳೂರು, ಜು.12: ಕೊರೋನ-ಲಾಕ್‌ಡೌನ್ ಸಂದರ್ಭ ಕಟ್ಟಡ ಕಾರ್ಮಿಕರಿಗೆ ರಾಜ್ಯ ಕಲ್ಯಾಣ ಮಂಡಳಿಯಿಂದ ನೀಡಲ್ಪಟ್ಟ ಆಹಾರ ಧಾನ್ಯ ಕಿಟ್ ವಿತರಣೆಯಲ್ಲಿ ವ್ಯಾಪಕವಾದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅರ್ಹ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು)ನ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ನಗರದ ಸಹಾಯಕ ಆಯುಕ್ತರ ಕಚೇರಿಯ ಮುಂದೆ ಸೋಮವಾರ ಧರಣಿ ನಡೆಸಲಾಯಿತು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿುಂದ 2020ರಲ್ಲೂ ಕೋಟ್ಯಂತರ ಹಣ ಬಿಡುಗಡೆ ಮಾಡಿ ಯಾವುದೇ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ನೀಡದೆ ಬಿಜೆಪಿ ಮತ್ತು ಇತರ ಶಾಸಕರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಲ್ಲದ ಜನರಿಗೆ ವಿತರಣೆ ಮಾಡಿ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಈ ಬಾರಿಯೂ ಆಹಾರಧಾನ್ಯ ವಿತರಣೆಯ ಹೆಸರಿನಲ್ಲಿ ದಂಧೆ ನಡೆಸಲಾಗಿದೆ. ಆಹಾರ ಕಿಟ್‌ನಲ್ಲಿ ಕಳಪೆ ಆಹಾರ ಸಾಮಾಗ್ರಿಗಳಲ್ಲದೆ ವ್ಯತ್ಯಾಸಭರಿತ ಆಹಾರ ಧಾನ್ಯಗಳನ್ನು ನೀಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಸಂತ ಆಚಾರಿ ಆರೋಪಿಸಿದರು.
ದ.ಕ. ಜಿಲ್ಲೆಯಲ್ಲಿ ಸಾವಿರಾರು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ನೀಡದೆ ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗಪಡಿಸಲಾಗಿದೆ. ಸುಳ್ಯದಲ್ಲಿ ಕಲ್ಯಾಣ ಮಂಡಳಿಯ ಹೆಸರನ್ನು ಮರೆಮಾಚಿ ಬಿಜೆಪಿಯ ಸ್ಟಿಕ್ಕರ್ ಅಂಟಿಸಿ ಬಿಜೆಪಿಯ ಕೊಡುಗೆ ಎಂದು ಪ್ರಚಾರ ಮಾಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಬಿಜೆಪಿಯ ಕಚೇರಿಗಳಲ್ಲಿ ಕಿಟ್ ವಿತರಣೆ ಮಾಡಲಾಗಿದೆ. ಭಜನಾ ಮಂದಿರ ಮತ್ತಿತರ ಧಾರ್ಮಿಕ ಕೇಂದ್ರಗಳಲ್ಲಿ ವಿತರಿಸಿ ಹಿಂದೂಯೇತರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಟ್ಟಡ ಕಾರ್ಮಿಕರು ಕಿಟ್ ಪಡೆಯದಂತೆ ತಡೆಯಲಾಗಿದೆ ಎಂದು ವಸಂತ ಆಚಾರಿ ಹೇಳಿದರು.
ಈ ಬಗ್ಗೆ ತನಿಖೆ ನಡೆಸಿ ಅರ್ಹರಿಗೆ ಕಿಟ್ ವಿತರಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು. ಅರ್ಹ ಕಟ್ಟಡ ಕಾರ್ಮಿಕರಿಗೆ 2021ರ ಆಹಾರ ಧಾನ್ಯದ ಕಿಟ್ ಮತ್ತು 3 ಸಾವಿರ ರೂ. ಹಾಗೂ 2020ರ 5,000 ರೂ. ಲಾಕ್‌ಡೌನ್ ಪರಿಹಾರವನ್ನು ತಕ್ಷಣ ನೀಡದಿದ್ದರೆ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಈ ತಿಂಗಳಾಂತ್ಯದಲ್ಲಿ ಅನಿರ್ದಿಷ್ಟವಾದಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ಸಿಐಟಿಯು ಮುಖಂಡರಾದ ಪಾಂಡುರಂಗ, ಅಶೋಕ್ ಶ್ರೀಯಾನ್, ಉಮೇಶ್ ಶಕ್ತಿನಗರ, ಮನೋಜ್ ಉರ್ವಸ್ಟೋರ್, ಜನಾರ್ದನ ಕುತ್ತಾರ್, ರೋಹಿದಾಸ್ ತೊಕ್ಕೊಟ್ಟು, ದಯಾನಂದ ಕೊಪ್ಪಲಕಾಡು, ಮೋಹನ್ ಜಲ್ಲಿಗುಡ್ಡೆ, ರವಿಚಂದ್ರ ಕೊಂಚಾಡಿ, ದಿನೇಶ್ ಶೆಟ್ಟಿ ಜಪ್ಪಿನಮೊಗರು ಮತ್ತಿತರರು ಪಾಲ್ಗೊಂಡಿದ್ದರು.







