ಮಡಿಕೇರಿ: ಗ್ರಾ.ಪಂ ನೌಕರರಿಗೆ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ; ನೌಕರರ ಸಂಘದ ಆರೋಪ

ಮಡಿಕೇರಿ ಜು.12 : ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ 700 ಕ್ಕೂ ಹೆಚ್ಚಿನ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲವೆಂದು ಗ್ರಾ.ಪಂ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಗ್ರಾ.ಪಂ ನೌಕರರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜು.15 ರಂದು ಸಾಂಕೇತಿಕ ಪ್ರತಿಭಟನೆಯ ಮೂಲಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
15ನೇ ಹಣಕಾಸು ಯೋಜನೆಯಡಿ ಸಿಬ್ಬಂದಿಗಳ ವೇತನ ಪಾವತಿಸಬೇಕು, ಸ್ವಚ್ಛತಾ ಕೆಲಸಗಾರರು ಹಾಗೂ ಇತರ ಸಿಬ್ಬಂದಿಗಳ ನೌಕರಿಗೆ ಅನುಮೋದನೆ ನೀಡಬೇಕು, ಕೋವಿಡ್‍ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರ ಘೋಷಿಸಬೇಕು, ಅನುಕಂಪದ ನೇಮಕಾತಿ ಮಾಡಬೇಕು. ಇಎಫ್‍ಎಂಎಸ್ ನಲ್ಲಿ ಎಲ್ಲಾ ಸಿಬ್ಬಂದಿಗಳ ಮಾಹಿತಿ ನಮೂದಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಬಿಲ್ ಕಲೆಕ್ಟರ್/ ಗುಮಾಸ್ಥರಿಂದ ಕಾರ್ಯದರ್ಶಿ ಗ್ರೇಡ್ 2 ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೀಡಲಾಗಿದ್ದ ಬಡ್ತಿ ಆದೇಶವನ್ನು ಆರ್ಥಿಕ ಒಪ್ಪಿಗೆ ಇದ್ದರೂ ದುರುದ್ದೇಶದಿಂದ ಹಿಂಪಡೆಯಲಾಗಿದೆ ಎಂದು ಆರೋಪಿಸಿದ ಅವರು, ತಕ್ಷಣ ಬಡ್ತಿ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪಿ.ಉಮೇಶ್ ಉಪಸ್ಥಿತರಿದ್ದರು.





