ಕಡತಗಳ ವಿಲೇಗೆ ವಿಳಂಬ ಬೇಡ: ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ

ಮಂಗಳೂರು, ಜು. 12: ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿ ಕಡತಗಳ ವಿಲೇ ಮಾಡುವಲ್ಲಿ ವಿಳಂಬ ಮಾಡದಂತೆ ಸರಕಾರ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಜಿ.ಪಂ. ಸಿಇಒರವರು ತಾಲೂಕು ಪಂಚಾಯತ್ ಇಒಗಳ ಮೂಲಕ ತಮ್ಮ ಅಧೀನದ ಗ್ರಾಪಂ ವ್ಯಾಪ್ತಿಯ ಹಾಗೂ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ಕಂದಾಯ ಇಲಾಖೆಯ ವ್ಯಾಪ್ತಿಯ ಕಡತಗಳನ್ನು ವಿಳಂಬ ಮಾಡದೆ ವಿಲೇ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು.
ದ.ಕ. ಜಿಲ್ಲಾ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕಾರಣವಿಲ್ಲದೆ ಕಡತಗಳ ವಿಲೇಗೆ ವಿಳಂಬವಾಗದಂತೆ ಗಮನ ಹರಿಸಬೇಕು ಎಂದರು.
ಪಡುಮಲೆಯಲ್ಲಿ ಕೋಟಿ ಚೆನ್ನಯ್ಯರ ಜನ್ಮ ಸ್ಥಳ ಅಭಿವೃದ್ಧಿಗೆ ಐದು ವರ್ಷಗಳ ಹಿಂದೆ ಸುಮಾರು 2 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದರೂ ಈವರೆಗೂ ಖರ್ಚು ಮಾಡಲು ಆಗಿಲ್ಲ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕ ಯು.ಟಿ.ಖಾದರ್ ಮಾತನಾಡಿ 8 ಕೋಟಿ ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ಕ್ರಮ ಆಗಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿ, ಪಡುಮಲೆಯಲ್ಲಿ ಕೋಟಿ ಚನ್ನಯರ ಜನ್ಮಸ್ಥಳ ಅಭಿವೃದ್ಧಿಗೆ ಸಂಬಂಧಿಸಿ ಸರಕಾರದ ಅನುಮೋದನೆ ಮಂಜೂರಾತಿ ನಿರೀಕ್ಷೆ ಮಾಡಿಕೊಂಡಿ ಕಾಮಗಾರಿ ಆರಂಭಕ್ಕೆ ಜಿಲ್ಲಾಧಿಕಾರಿ ಹಂತದಲ್ಲಿ ಅವಕಾಶವಿದ್ದು, ಆ ರೀತಿ ಕ್ರಮ ವಹಿಸುವುದಾಗಿ ಹೇಳಿದರು.
ಹಕ್ಕು ಪತ್ರ: ಬಗೆಹರಿಯದ ಡೀಮ್ಡ್ ಫಾರೆಸ್ಟ್ ಸಮಸ್ಯೆ
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತಂತೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ವಿಷಯ ಪ್ರಸ್ತಾಪಿಸಿ, ಕಳೆದ ಎರಡು ವರ್ಷಗಳ ಕಾಲ ತಮ್ಮ ವ್ಯಾಪ್ತಿಯಲ್ಲಿ ಹಕ್ಕುಪತ್ರಕ್ಕಾಗಿ ಅಲೆದಾಡಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಮಾರ್ಚ್‌ನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಸಂದರ್ಭ 9 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಅರಣ್ಯ ಇಲಾಖೆಯಿಂದ ಇನ್ನೂ ಅನುಮತಿ ದೊರಕದೆ ಮೂರು ತಿಂಗಳು ಕಳೆದರೂ ಅವರಿಗೆ ಹಕ್ಕುಪತ್ರ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಅರಣ್ಯಾಧಿಕಾರಿ ಕರಿಕಲನ್ ಮಾತನಾಡಿ ಈ ಬಗ್ಗೆ ಎನ್‌ಒಸಿ(ನಿರಾಪೇಕ್ಷಣಾ ಪತ್ರ)ಯನ್ನು ನೀಡುವುದಾಗಿ ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಶಕ್ತಿನಗರದಲ್ಲಿ ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಹಕ್ಕುಪತ್ರ ಸಮಸ್ಯೆಯಿಂದಾಗಿ ಜನರಿಗೆ ಉತ್ತರಿಸುವುದೇ ಕಷ್ಟವಾಗಿದೆ. ಅಲ್ಲಿ 930 ಮಂದಿಗೆ ನಿವೇಶನಕ್ಕಾಗಿ ಭೂಮಿಯನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಮನಪಾದಿಂದ ಆ 10 ಎಕರೆ ಜಾಗಕ್ಕೆ ಪ್ರತಿಯಾಗಿ ಬೇರೆಡೆ 20 ಎಕರೆ ಜಾಗವನ್ನು ಮೀಸಲಿರಿಸಿದೆ. ಅರಣ್ಯ ಇಲಾಖೆಯಿಂದ ಅದಕ್ಕೆ ಒಪ್ಪಿಗೆ ದೊರಕಿ ಅದನ್ನು ಸರಕಾರಕ್ಕೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ 3ನೆ ಅಲೆ ನಿಯಂತ್ರಣ: ಪ್ರತ್ಯೇಕ ಸಭೆಗೆ ನಿರ್ಧಾರ
ಕೋವಿಡ್ ಒಂದು ಮತ್ತು 2ನೆ ಅಲೆಯಿಂದಾಗಿ ಜನರಿಗೆ ಸಾಕಷ್ಟು ಹಬ್ಬ ಹರಿದಿನಗಳನ್ನು ಆಚರಿಸಲು ಸಾಧ್ಯವಾಗಿಲ್ಲ. ಸದ್ಯ ಎಲ್ಲವೂ ಅನ್‌ಲಾಕ್ ಆಗಿದೆ. ಮುಂದಿನ ಆಗಸ್ಟ್ ತಿಂಗಳಿನಿಂದ ಮತ್ತೆ ಹಬ್ಬಗಳು ಆರಂಭಗೊಳ್ಳಲಿದ್ದು, ಗಣೇಶ ಚತುರ್ಥಿಗೆ ಒಂದು ತಿಂಗಳ ಮುಂಚಿತವಾಗಿ ಗಣೇಶನ ವಿಗ್ರಹಗಳನ್ನು ರಚಿಸಲಾಗುತ್ತದೆ. ಆದರೆ ಕೋವಿಡ್ 3ನೆ ಅಲೆಯ ಹಿನ್ನೆಲೆಯಲ್ಲಿ ಈ ಕುರಿತಂತೆ ಜಿಲ್ಲಾಡಳಿತ ಸ್ಪಷ್ಟ ನಿಯಮಗಳನ್ನು ಬಿಡುಗಡೆಗೊಳಿಸುವುದು ಅಗತ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರತಿಕ್ರಿಯಿಸಿ, ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇ. 1.75ರಿಂದ 2.5ಕ್ಕೆ ಏರಿಕೆಯಾಗುತ್ತಿದೆ. ಇದೇ ವೇಳೆ ನೆರೆಯ ಉಡುಪಿಯಲ್ಲಿಯೂ ಇದು ಶೇ. 4ರಷ್ಟಿದೆ. ಕಾಸರಗೋಡಿನಲ್ಲಿ ಶೇ. 10ರಷ್ಟಿದೆ. ಇದೇ ವೇಳೆ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿಯೂ ಹೊರ ಜಿಲ್ಲೆಗಳ ಸೋಂಕಿತರು ಜಿಲ್ಲೆಯ ಆಸ್ರತ್ರೆಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಈ ನಿಟ್ಟಿನಲ್ಲಿ ಬಿಗಿ ಕ್ರಮಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ಶನಿವಾರ ಹಾಗೂ ರವಿವಾರದ ರಜಾ ದಿನಗಳಲ್ಲಿ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇದಕ್ಕೆ ನಿಯಂತ್ರಿಸಬೇಕಾಗಿದೆ ಎಂದು ಹೇಳಿದರು.
ಈ ಬಗ್ಗೆ ಒಂದು ವಾರದೊಳಗೆ ಪ್ರತ್ಯೇಕ ಸಭೆಯನ್ನು ಕರೆದು ನಿರ್ಧಾರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.










