ಬಡತನದಿಂದ ಕಂಗೆಟ್ಟು ತಮ್ಮ ಕಿಡ್ನಿಗಳನ್ನು ದಂಧೆಕೋರರಿಗೆ ಮಾರುತ್ತಿರುವ ಗ್ರಾಮೀಣ ಜನರು !

ಸಾಂದರ್ಭಿಕ ಚಿತ್ರ
ಗುವಾಹಟಿ: ಅಸ್ಸಾಂ ರಾಜ್ಯದ ಮೊರಿಗಾಂವ್ ಜಿಲ್ಲೆಯ ದಕ್ಷಿಣ್ ಧರಮ್ತುಲ್ ಎಂಬ ಗ್ರಾಮದಲ್ಲಿ ಬಡತನದಿಂದ ಕಂಗೆಟ್ಟಿರುವ ಗ್ರಾಮಸ್ಥರು ಜೀವನ ನಿರ್ವಹಣೆಗಾಗಿ ತಮ್ಮ ಕಿಡ್ನಿಗಳನ್ನೇ ಮಾರಾಟ ಮಾಡುತ್ತಿರುವ ಮನಕಲಕುವ ವಿಚಾರ ಬೆಳಕಿಗೆ ಬಂದಿದೆ.
ಗ್ರಾಮದ ಕೆಲ ಜನರು ಒಬ್ಬ ಏಜಂಟ್ ಸಹಿತ ಮೂವರನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದಾಗ ಈ ಕಿಡ್ನಿ ದಂಧೆ ಬೆಳಕಿಗೆ ಬಂದಿತ್ತು. ಇಲ್ಲಿಯ ತನಕ ಈ ದಂಧೆಕೋರರಿಗೆ ಗ್ರಾಮದ ಸುಮಾರು 30 ಮಂದಿ ತಮ್ಮ ಕಿಡ್ನಿ ಮಾರಾಟ ಮಾಡಿದ್ದಾರೆಂದು ತಿಳಿದು ಬಂದಿದೆ.
ಸುಮಾರು ಅರ್ಧ ಡಜನ್ ಗ್ರಾಮಸ್ಥರು ತಾವು ಕಿಡ್ನಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕೆಲವರು ಸಾಲ ಮರುಪಾವತಿಗಾಗಿ ಹಾಗೂ ಇನ್ನು ಕೆಲವರು ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಹಣ ಹೊಂದಿಲು ತಮ್ಮ ಕಿಡ್ನಿ ಮಾರಿದ್ದಾರೆಂದು ತಿಳಿದು ಬಂದಿದೆ. ಈ ಗ್ರಾಮದ ಹೆಚ್ಚಿನ ನಿವಾಸಿಗಳು ರೈತರು ಹಾಗೂ ದಿನಗೂಲಿ ಕಾರ್ಮಿಕರಾಗಿದ್ದು ಕೋವಿಡ್ ಸಾಂಕ್ರಾಮಿಕ ಅವರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿತ್ತು.
ಕೆಲ ಗ್ರಾಮಸ್ಥರನ್ನು ಕೊಲ್ಕತ್ತಾಗೆ ಕರೆದುಕೊಂಡು ಹೋಗಿ ಅಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿತ್ತೆಂದು ತಿಳಿದು ಬಂದಿದೆ. ಬಂಧಿತರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾರೆ. ಗುವಾಹಟಿಯ ಲಿಲಿಮಾಯ್ ಬೋಡೋ ಎಂಬ ಮಹಿಳೆ ಎರಡು ದಿನಗಳ ಹಿಂದೆ ಕಿಡ್ನಿ ಮಾರಾಟ ಮಾಡುವವರಿದ್ದಾರೆಯೇ ಎಂದು ಹುಡುಕಿಕೊಂಡು ಗ್ರಾಮಕ್ಕೆ ಬಂದಿದ್ದಳು. ಇದನ್ನು ತಿಳಿದ ಒಂದು ಬಡ ಕುಟುಂಬ ಹಣದ ಅವಶ್ಯಕತೆಯಿಂದಾಗಿ ಆಕೆಯನ್ನು ಸಂಪರ್ಕಿಸಿತ್ತು ಆದರೆ ಹಣ ದೊರೆತಿರಲಿಲ್ಲವೆನ್ನಲಾಗಿದೆ. ಪ್ರತಿ ಕಿಡ್ನಿಗೆ ರೂ 4-5 ಲಕ್ಷ ನೀಡುವುದಾಗಿ ಹೇಳುತ್ತಿದ್ದ ದಂಧೆಕೋರರು ನಂತರ ರೂ 1.5 ಲಕ್ಷ ಕಮಿಷನ್ ಹಣವನ್ನು ಅದರಿಂದ ಕಡಿತಗೊಳಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.







