ದ.ಕ. ಜಿಲ್ಲಾದ್ಯಂತ ಭಾರೀ ಗಾಳಿ-ಮಳೆ: 9 ಮನೆಗಳಿಗೆ ಹಾನಿ
ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ

ಮಂಗಳೂರು, ಜು.12: ದ.ಕ. ಜಿಲ್ಲಾದ್ಯಂತ ಸೋಮವಾರವೂ ಮಳೆ ಬಿರುಸು ಪಡೆದಿದ್ದು, ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 9 ಮನೆಗಳು ಭಾಗಶಃ ಹಾನಿಗೀಡಾಗಿವೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದು, ಮಧ್ಯಾಹ್ನದ ಬಳಿಕ ಕೊಂಚ ಬಿಡುವು ನೀಡಿತ್ತು.
ಮಂಗಳೂರು ನಗರದಲ್ಲೂ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಇದರಿಂದ ನಗರದ ಕದ್ರಿ ಶಿವಭಾಗ್‌ನಲ್ಲಿ ಬೆಳಗ್ಗೆ ದೊಡ್ಡ ಮರವೊಂದು ಧರಾಶಾಹಿಯಾಗಿದೆ. ಲಾಲ್‌ಬಾಗ್‌ನಲ್ಲಿ ಅಪಾರ್ಟ್‌ಮೆಂಟ್‌ವೊಂದರ ಆವರಣ ಗೋಡೆ ಮೇಲೆ ಮರ ಬಿದ್ದಿತ್ತು. ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದ್ದಾರೆ.
ಉಳ್ಳಾಲ, ಸೋಮೇಶ್ವರ ಮತ್ತು ಜಿಲ್ಲೆಯ ಕಡಲ ತೀರದ ಪ್ರದೇಶಗಳಲ್ಲಿಯೂ ಸಮುದ್ರ ಪ್ರಕ್ಷುಬ್ಧವಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಜಿಲ್ಲಾಡಳಿತ ಎಚ್ಚರಿಸಿದೆ. ಕಡಲ ತೀರಗಳಿಗೆ ಭೇಟಿ ನೀಡುವವರು ನೀರಿನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರಿಗೂ ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.










