ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನು ಸರಕಾರ ವಜಾ ಗೊಳಿಸಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು, ಜು. 12: `ಸುಧೀಂದ್ರ ರಾವ್ ಅವರೇ ಹೇಳುವಂತೆ, ಅವರ ಸಹಿಯನ್ನು ಬೇರೆ ಯಾವುದೋ ಉದ್ದೇಶಕ್ಕೆಂದು ಪಡೆದು, ಅದನ್ನು ಅವರ ರಾಜೀನಾಮೆಗೆ ಬಳಸಿಕೊಳ್ಳಲಾಗಿದೆ. ಏಕೆಂದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಪಿಸಿಬಿ) ಅಧ್ಯಕ್ಷರು ಸ್ವತಃ ರಾಜೀನಾಮೆ ನೀಡದ ಹೊರತು, ನ್ಯಾಯಾಲಯದ ಆದೇಶ ಅಥವಾ ಅದಕ್ಕೆ ಬೇರೆ ಕಾರಣಗಳಿಲ್ಲದಿದ್ದಲ್ಲಿ ಅವರನ್ನು ವಜಾಗೊಳಿಸಲು ಸರಕಾರಕ್ಕೆ ಸಾಧ್ಯವಿಲ್ಲ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸುಧೀಂದ್ರ ರಾವ್ ಹೇಳುವಂತೆ ಸಿಎಂ ಯಡಿಯೂರಪ್ಪ ಅವರು, ತಮ್ಮ ಕುಟುಂಬ ಸದಸ್ಯರು ದಾವೋಸ್ ಮತ್ತು ಮಾರಿಷಸ್ ಪ್ರವಾಸಕ್ಕೆ ತೆರಳಿದ್ದು, ಮೊಲೆಕ್ಸ್ ಕಂಪೆನಿ ಅವರ ಪ್ರಯಾಣದ ಅಷ್ಟೂ ಖರ್ಚು ನೋಡಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಕಡತಗಳನ್ನು ಕೂಡಲೇ ತೆರವು ಮಾಡಬೇಕು ಎಂದಿದ್ದಾರೆ. ಅದರಂತೆ ಅವರು ಆ ಕೆಲಸ ಮುಗಿಸಿ ಕೊಟ್ಟಿದ್ದಾರೆ' ಎಂದು ಉಲ್ಲೇಖಿಸಿ ಆರೋಪಿಸಿದ್ದಾರೆ.
ಮರಿಸ್ವಾಮಿ ಅವರು ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ ಹಾಗೂ ಸೋದರ ಸಂಬಂಧಿ ಸಂಜಯ್ ಅವರಿಗೆ ರಾವ್ ಅವರನ್ನು ಪರಿಚಯಿಸುತ್ತಾರೆ. ರಾವ್ ಅವರ ಅಂದಾಜಿನಂತೆ ಈ ಮೂವರು ಸಿಎಂ ಕುಟುಂಬ ಸದಸ್ಯರು ಲಂಚವಾಗಿ ಸುಮಾರು 60 ಕೋಟಿ ರೂಪಾಯಿಗಳಷ್ಟು ಹಣ ಪಡೆದಿದ್ದಾರೆ' ಎಂದು ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
`ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ಅವರು 2019ರ ಡಿಸೆಂಬರ್ 30 ರಂದು ತಮ್ಮ ನೇಮಕದ ಬಗ್ಗೆ ನಡೆದ ಒಪ್ಪಂದ ಹಾಗೂ ಅದಕ್ಕಾಗಿ 16 ಕೋಟಿ ರೂ.ಲಂಚದ ಬೇಡಿಕೆಯ ಬಗ್ಗೆ ಹೇಳಿದ್ದಾರೆ. ಅದರರ್ಥ ಅವರು ಬಿಎಸ್‍ವೈ ಅವರ ಕುಟುಂಬಕ್ಕೆ ಇಷ್ಟು ಹಣವನ್ನು ಲಂಚವಾಗಿ ನೀಡಿದರೆ ಮಂಡಳಿಯ ಅಧ್ಯಕ್ಷತೆ ಪಡೆಯುತ್ತಾರೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.





