ಮೇಕೆದಾಟು ಯೋಜನೆ ವಿವಾದ: ತಮಿಳುನಾಡು ಸರಕಾರದ ನಡೆ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಧರಣಿ

ಬೆಂಗಳೂರು, ಜು.12: ಮೇಕೆದಾಟು ನೀರಿನ ಯೋಜನೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು ಕರೆದಿರುವ ಸರ್ವಪಕ್ಷಗಳ ಸಭೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.
ಸೋಮವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದ ಮುಂಭಾಗ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ಸದಸ್ಯರು, ತಮಿಳುನಾಡು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ನಮ್ಮ ನೆಲದಲ್ಲಿ ನಮ್ಮ ಜಲದ ಯೋಜನೆ ಸಂಬಂಧ ಕಾಮಗಾರಿ ಪ್ರಾರಂಭಿಸಲು ಯಾರ ಅನುಮತಿಯೂ ನಮಗೆ ಬೇಕಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡು ಸಿಎಂಗೆ ಪತ್ರ ಬರೆದಿರುವುದು ಕನ್ನಡ ವಿರೋಧಿ ಧೋರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡಿಗೆ ಮೇಕೆದಾಟು ಯೋಜನೆಯನ್ನು ವಿರೋಧಿಸುವ ಯಾವುದೇ ಹಕ್ಕಿಲ್ಲ. ಅವರು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸುವಂತೆಯೂ ಇಲ್ಲ ಎಂದ ಅವರು, ನಮ್ಮ ರಾಜ್ಯದ ಆಡಳಿತಾರೂಢ ಪಕ್ಷ, ವಿರೋಧ ಪಕ್ಷವಾಗಲಿ ಈ ಬಗ್ಗೆ ಪ್ರಬಲ ದನಿ ಎತ್ತದೇ ಇರುವುದು ವಿಷಾದನೀಯ ಎಂದರು.
ಕರ್ನಾಟಕ ಸರಕಾರ ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಅಷ್ಟೇ ಅಲ್ಲದೆ, ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯನ್ನು ವಿಳಂಬ ಮಾಡದಂತೆ ಈ ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿದರು.





