ಮೂರ್ಖರೆಲ್ಲ ಸೇರಿ ಬಿಜೆಪಿ ಪಕ್ಷವಾಗಿದೆಯೇ ಅಥವಾ ಬಿಜೆಪಿಗೆ ಸೇರಿದ ಮೇಲೆ ಮೂರ್ಖರಾಗುವರೇ?: ಕಾಂಗ್ರೆಸ್ ಟ್ವೀಟ್

ಬೆಂಗಳೂರು, ಜು. 12: `ಕಾಂಗ್ರೆಸ್‍ನದ್ದು ಅನ್ನಭಾಗ್ಯ, ಬಿಜೆಪಿಯದ್ದು ಕನ್ನಭಾಗ್ಯ! ಬಡವರ ಪಡಿತರ ಅಕ್ಕಿಯ ಕಳ್ಳ ಸಾಗಣೆ ಬಿಜೆಪಿ ಆಡಳಿತದಲ್ಲಿ ಎಗ್ಗಿಲ್ಲದೆ ಸಾಗಿದರೂ ತಡೆಗಟ್ಟುವ ಯಾವ ಕ್ರಮವನ್ನೂ ಸರಕಾರ ಕೈಗೊಂಡಿಲ್ಲ. ಸರಕಾರದ ನಿರ್ಲಕ್ಷ್ಯ ನೋಡಿದರೆ, ಇದರಲ್ಲಿ ಬಿಜೆಪಿಗರ ಪಾಲುದಾರಿಕೆಯೂ ಇರುವಂತಿದೆ. ಬಿಎಸ್‍ವೈ ಅವರೇ, ಕೂಡಲೇ ಈ ಕಳ್ಳದಂಧೆ ತಡೆಗಟ್ಟಿ' ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ದೇಶದಲ್ಲಿ ಕೋವಿಡ್ ಮೂರನೆ ಅಲೆ ಪ್ರಾರಂಭವಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಒಂದು ಮತ್ತು ಎರಡನೆ ಅಲೆಗೆ ತೋರಿದ ನಿರ್ಲಕ್ಷ್ಯವನ್ನೇ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮುಂದುವರೆಸಿವೆ. ಅಗತ್ಯ ಸಿದ್ಧತೆಗಳನ್ನ ಮಾಡುವುದನ್ನು ಬಿಟ್ಟು ಬಿಜೆಪಿ ಸರಕಾರ, `ಬಿಜೆಪಿ ವಿರುದ್ದ ಬಿಜೆಪಿ' ಕಿತ್ತಾಟದಲ್ಲಿ ಮುಳುಗಿ ರಾಜ್ಯವನ್ನು ಮತ್ತೊಮ್ಮೆ ದುರಂತಕ್ಕೆ ತಳ್ಳಲು ಸಜ್ಜಾಗಿದೆ' ಎಂದು ಸಂಶಯ ವ್ಯಕ್ತಪಡಿಸಿದೆ.
ಕೋವಿಡ್ ಲಸಿಕೆ ಸಿಗದೆ ಜನತೆ ಪರದಾಡುತ್ತಿದ್ದರೆ ಇತ್ತ ಬಾಲಿಶ ಹೇಳಿಕೆಗಳ ಮೂಲಕ ಬಿಜೆಪಿ ಬಂಡತನದ ಪರಮಾವಧಿ ತಲುಪಿದೆ. 900 ರೂ.ಗಳಿಗೆ ಲಸಿಕೆ ಮಾರಾಟ ಮಾಡಿಕೊಂಡು ಕಮಿಷನ್ ಪಡೆದ ನಿಮ್ಮ ಸಂಸದ ತೇಜಸ್ವಿ ಸೂರ್ಯನಿಗೆ ಆ ವ್ಯವಹಾರ ಚೆನ್ನಾಗಿ ತಿಳಿದಿದೆ ಕೇಳಿ ನೋಡಿ! ಹಾಗೆಯೇ ಮೋದಿ ರಫೇಲ್ ಡೀಲ್ ಮೂಲಕ `ಹಗರಣದ ವಿಶ್ವಗುರು' ಆಗಿದ್ದು ತಿಳಿದಿದೆಯೇ? ಎಂದು ಪ್ರಶ್ನಿಸಿದೆ.
ಮೂರ್ಖರೆಲ್ಲ ಸೇರಿ ಬಿಜೆಪಿ ಪಕ್ಷವಾಗಿದೆಯೇ ಅಥವಾ ಬಿಜೆಪಿಗೆ ಸೇರಿದ ಮೇಲೆ ಮೂರ್ಖರಾಗುವರೇ? ಎಂಬುದೇ ಯಕ್ಷಪ್ರಶ್ನೆ!
ಇಂಧನ ತೈಲಗಳ ಬೆಲೆ ಏರಿಕೆ ವಿರೋಧಿಸಿ ಸೈಕಲ್ ತುಳಿದರೆ ವ್ಯಾಯಾಮವಾಗುತ್ತದೆ ಎಂಬುದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಬಾಲಿಶ ಸಮರ್ಥನೆ! ಸಂಸದರೇ ತಾವು ದಾವಣಗೆರೆಯಿಂದ ಬೆಂಗಳೂರಿಗೆ ಸೈಕಲ್ ತುಳಿದು ಪ್ರಯಾಣಿಸಿ ವ್ಯಾಯಾಮ ಮಾಡುವಿರಾ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.





