ನಂಜನಗೂಡಿನ ವಿವಿಧ ಗ್ರಾಮಗಳಿಗೆ ನೀರು ಹರಿಸುವ 'ನಗು ಏತ ನೀರಾವರಿ ಯೋಜನೆ' ಸಾಕಾರ
ಬೆಂಗಳೂರು, ಜು. 12: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲವು ಗ್ರಾಮಗಳಿಗೆ ನೀರು ಹರಿಸುವ `ನುಗು ಏತ ನೀರಾವರಿ ಯೋಜನೆ'ಯ 35 ವರ್ಷಗಳ ಕನಸನ್ನು ನನಸಾಗಲಿದ್ದು, ಹಣಕಾಸು ಇಲಾಖೆ 80 ಕೋಟಿ ರೂ.ಯೋಜನೆಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ನಂಜನಗೂಡು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, `2018ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ `ನುಗು ಏತ ನೀರಾವರಿ ಯೋಜನೆ' ಜಾರಿಗೊಳಿಸಬೇಕೆನ್ನುವುದು ಕ್ಷೇತ್ರದ ಜನರ ಪ್ರಮುಖ ಬೇಡಿಕೆಯಾಗಿತ್ತು. ನುಗು ಜಲಾಶಯ ನೀರಿನ ಮಟ್ಟ ಏರಿಕೆಗಾಗಿ ಕಬಿನಿ ನದಿಯಿಂದ ನುಗು ಏತ ಯೋಜನೆ ಜಾರಿಯಾಗಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಬಳಿ ಕಬಿನಿ ನದಿಯಿಂದ ಪಂಪ್ ಮೂಲಕ ನೀರನ್ನು ಎತ್ತಿ ರೈಸಿಂಗ್ ಮೇನ್ ಮೂಲಕ ನುಗು ನದಿಗೆ ಹರಿಸಿ ಅಣೆಕಟ್ಟು ತುಂಬಿಸುವುದೇ ನುಗು ಏತ ಯೋಜನೆಯಾಗಿದೆ ಎಂದು ಹೇಳಿದ್ದಾರೆ.
`ತಾನು ಶಾಸಕ ಆಯ್ಕೆಯಾದ ತಕ್ಷಣವೇ ಈ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ 2019-20ರ ಬಜೆಟ್‍ನಲ್ಲಿ 80ಕೋಟಿ ರೂ.ಅನುದಾನ ಮೀಸಲಿಟ್ಟರು. ಆ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮೈಸೂರಿಗೆ ಬಂದಾಗ `ನುಗು ಯೋಜನೆ'ಯತ್ತ ಗಮನ ಸೆಳೆದಾಗ ಸ್ಥಳದಲ್ಲಿಯೇ ಮಂಜೂರಾತಿ ನೀಡಿ, ಆರ್ಥಿಕ ಮಂಜೂರಾತಿಗೆ ಸ್ಥಳದಲ್ಲೇ ಆದೇಶ ಮಾಡಿ ಹೊರಡಿಸಿದರು.
ಈ ಯೋಜನೆಗಾಗಿ ನದಿಯಿಂದ 270 ಕ್ಯೂಸೆಕ್ಸ್ ನೀರು ಎತ್ತಲಾಗುತ್ತದೆ. 2.4 ಟಿಎಂಸಿ ನೀರಿನ ಅಗತ್ಯವಿದ್ದು 3.05 ಕಿ.ಮೀ. ಉದ್ದಕ್ಕೆ 2.5 ಮೀಟರ್ ವ್ಯಾಸದ ಎಂಎಸ್ ರೈಸಿಂಗ್ ಪೈಪ್‍ಲೈನ್‍ನಿಂದ ಡೆಲಿವರಿ ಚೇಂಬರ್ 1.3 ಕಿ.ಮೀ. ನಾಲೆ ಕೊರೆದು ಇದರಿಂದ ನುಗು ನದಿಗೆ ನೀರು ಹರಿಸಿ ಅಣೆಕಟ್ಟೆಗೆ ತುಂಬಲಾಗುತ್ತದೆ. ಇದರಿಂದ ಹತ್ತು ಸಾವಿರ ಎಕರೆ ಪ್ರದೇಶಕ್ಕೆ ನೀರು ಲಭಿಸಲಿದೆ.
ತಾಲೂಕಿನ ಕರತಲೆ, ಮಸಗೆ, ಕಳಲೆ, ಹಂಡುವಿನಹಳ್ಳಿ, ದೇಬೂರು, ಕರಳಾಪುರ, ದೇವೀರಮ್ಮನಹಳ್ಳಿ, ಸಿಂಧುವಳ್ಳಿ, ಕಾಳಿಹುಂಡಿ, ಸಿಂಗಾರಿಪುರ, ಶ್ರೀನಗರ, ಹೆಡತಲೆ, ಗೀಕಹಳ್ಳಿ, ದೇವರಸನಹಳ್ಳಿ, ಉಪ್ಪನಹಳ್ಳಿ, ಹೊಸೂರು, ಕೋಡಿನರಸೀಪುರ, ಹೊರಳವಾಡಿ, ಮಳ್ಳೂರು, ಅಳಗಂಚಿಪುರ ಸೇರಿದಂತೆ 100ಕ್ಕೂ ಹೆಚ್ಚು ಗ್ರಾಮಗಳ ಅಚ್ಚುಕಟ್ಟು ದೇಶಕ್ಕೆ ನೀರು ಪೂರೈಕೆಯಾಗಲಿದೆ. ನರಸಾಂಬುಧಿ ಕೆರೆ, ಕಳಲೆ ಚೆಲುವಾಂಬ ಕೆರೆ ಸೇರಿದಂತೆ ಎಂಟು ಕೆರೆ ಕಟ್ಟೆಗಳೂ ತುಂಬುವುದರಿಂದ ಹತ್ತಾರು ಗ್ರಾಮಗಳ ಅಂತರ್ಜಲ ಹೆಚ್ಚಲಿದೆ. ಇದರ ಜತೆಗೆ 17 ಕೋಟಿ ರೂ.ವೆಚ್ಚದಲ್ಲಿ ಸೋಲಾರ್ ಪ್ಯಾಂಟ್ ನಿರ್ಮಾಣ ಮಾಡಿ ಎಂದು ಎರಡು ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಯೋಜನೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.





