ಪುಸ್ತಕಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲು ಸಿಎಂಗೆ ಮನವಿ

ಬೆಂಗಳೂರು, ಜು. 12: `ಹೊಸದಿಲ್ಲಿ ಮತ್ತು ಕೇರಳ ರಾಜ್ಯಗಳ ಮಾದರಿಯಲ್ಲೆ ರಾಜ್ಯ ಸರಕಾರ ಪುಸ್ತಕವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಟಿ.ಎಸ್.ನಾಗಾಭರಣ ಅಧ್ಯಕ್ಷತೆಯಲ್ಲಿ ಪುಸ್ತಕೋದ್ಯಮಕ್ಕೆ ಸಂಬಂಧಿಸಿದಂತೆ `ಪ್ರಕಾಶಕರು ಮತ್ತು ಮುದ್ರಕರ ಸಂಘಧ ಸಭೆ'ಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಕನ್ನಡ ಭಾಷಾ ಮತ್ತು ಸಂಸ್ಕೃತಿಯ ಪ್ರಸಾರದಲ್ಲಿ ಪುಸ್ತಕ ಪ್ರಕಾಶಕರ ಪಾತ್ರ ಬಹುಮುಖ್ಯ. ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪುಸ್ತಕಗಳ ಪಾತ್ರ ದೊಡ್ಡದು. ಹಿರಿಯ ಮನೋವಿಜ್ಞಾನಿ ಡಾ.ಸಿ.ಆರ್.ಚಂದ್ರಶೇಖರ್ ಸಹಿತ ಹಲವರು `ಪುಸ್ತಕ ಓದು ಮಾನಸಿಕ ಸ್ವಾಸ್ಥ್ಯ ಚಿಕಿತ್ಸೆಗೆ ಫಲಕಾರಿ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದುದರಿಂದ ಈಗಾಗಲೇ ದಿಲ್ಲಿ ಮತ್ತು ಕೇರಳ ಸರಕಾರಗಳು ಪುಸ್ತಕವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿವೆ. ಹಾಗಾಗಿ ರಾಜ್ಯದಲ್ಲಿ ಪುಸ್ತಕವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಬೇಕು ಎಂದು ಕೋರಲಾಗಿದೆ. ಈ ಸಭೆಯಲ್ಲಿ ಕರ್ನಾಟಕ ಪ್ರಕಾಶಕರ ಸಂಘವು 20 ಬೇಡಿಕೆಗಳ ಮನವಿಯನ್ನು ಅಧ್ಯಕ್ಷರಿಗೆ ಸಲ್ಲಿಸಿತು. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 5ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿತು. ಪುಸ್ತಕ ಹಾಗೂ ಮುದ್ರಣ ನೀತಿಯ ಪರಿಷ್ಕರಣೆ ಹಾಗೂ ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಭೆಯಲ್ಲಿ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ ಕಂಬತ್ತಳ್ಳಿ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ದೊಡ್ಡೇಗೌಡ ಆರ್., ನ.ರವಿಕುಮಾರ್, ಎ.ರಮೇಶ ಉಡುಪ, ಸುರೇಶ್ ಬಿ.ಕೆ., ಎಂ.ಸುಜ್ಞಾನ ಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.





