ಬೆಂಗಳೂರು: ಪ್ರತ್ಯೇಕ ಪಥ ಸರಿಪಡಿಸಲು ಸಾರ್ವಜನಿಕರ ಒತ್ತಾಯ
ಬೆಂಗಳೂರು, ಜು.12: ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಹೆಬ್ಬಾಳದವರೆಗೆ ರಿಂಗ್ ರಸ್ತೆಯಲ್ಲಿ ಬಿಎಂಟಿಸಿ ಹಾಗೂ ವೋಲ್ವೋ ಬಸ್ ಸಂಚಾರಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಪ್ರತ್ಯೇಕ ಪಥ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತ್ತಿದೆ. ಬಿಎಂಟಿಸಿಯಿಂದ ಸಂಚರಿಸುವ ಒಂದು ಅಥವಾ ಎರಡು ಬಸ್‍ಗಳಿಗೆ ಪ್ರತ್ಯೇಕ ಪಥ ಅವಶ್ಯಕತೆಯಿಲ್ಲ. ಈ ಪ್ರತ್ಯೇಕ ಪಥವನ್ನು ದಾಟುವ ವೇಳೆ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ.
ಇರುವ 50 ಅಡಿ ರಸ್ತೆಯಲ್ಲಿ ಪ್ರತ್ಯೇಕ ನಿರ್ಮಾಣ ಮಾಡಿರುವುದರಿಂದ ಹಾಗೂ ಮೆಟ್ರೋ ಕಾಮಗಾರಿಗಾಗಿ 10 ಅಡಿ ರಸ್ತೆ ಬಳಸಿಕೊಳ್ಳುತ್ತಿರುವ ಹಿನ್ನೆಲೆ ಉಳಿದ 15 ಅಡಿ ರಸ್ತೆಯಲ್ಲಿ ಇತರ ವಾಹನಗಳು ಸಂಚರಿಸಬೇಕಾಗಿದೆ. ಇದರಿಂದ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ತಕ್ಷಣ ಸಂಚಾರಿ ಪೊಲೀಸ್ ಅಧಿಕಾರಿಗಳ ಈ ಅವೈಜ್ಞಾನಿಕ ಪ್ರತ್ಯೇಕ ಪಥ ಸರಿಪಡಿಸಿ ಜನತೆಯ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





