ಬೆಂಗಳೂರು: ಒಂದೇ ಕುರ್ಚಿಗೆ ಅಧಿಕಾರಿಗಳಿಬ್ಬರು ಕಿತ್ತಾಟ!
ಬೆಂಗಳೂರು, ಜು.12: ಬಿಬಿಎಂಪಿ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕರ ಹುದ್ದೆಗೆ ಅಧಿಕಾರಿಗಳಿಬ್ಬರು ಬಹಿರಂಗವಾಗಿ ಕಿತ್ತಾಟ ನಡೆಸಿರುವುದು ಬೆಳಕಿಗೆ ಬಂದಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ಜರುಗಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಕೊಠಡಿಯಲ್ಲಿ ನಿರ್ದೇಶಕರಾಗಿದ್ದ ಮಂಜೇಶ್ ಅವರ ಕುರ್ಚಿಯಲ್ಲಿ ಮತ್ತೊಬ್ಬ ಅಧಿಕಾರಿ ವೆಂಕಟ್ ದುರ್ಗಾಪ್ರಸಾದ್ ಅವರು ಏಕಾಏಕಿ ಕುಳಿತುಕೊಂಡರು.
ಇನ್ನು, ಮಂಜೇಶ್ ಅವರು ಊಟಕ್ಕೆ ಹೋದ ಸಮಯದಲ್ಲಿ ಅವರ ಕುರ್ಚಿಯಲ್ಲಿ ಕುಳಿತ ವೆಂಕಟ್ ದುರ್ಗಾಪ್ರಸಾದ್ ಅವರು ಕುಳಿತು ಅಧಿಕಾರದ ಚಲಾಯಿಸಿದರು ಎಂದು ಹೇಳಲಾಗುತ್ತಿದೆ. ಅಲ್ಲದೆ, ಹುದ್ದೆಗೆ ನಿಯೋಜನೆಗೊಂಡಿರುವ ಆದೇಶದ ಪ್ರತಿ ತೋರಿಸಲು ಮುಂದಾಗದೆ ಕುರ್ಚಿ ಮೇಲೆ ಕುಳಿತರು ಎನ್ನುವ ಆರೋಪವೂ ಕೇಳಿಬಂದಿದೆ.
ವಿಚಾರಣೆ ನಡೆಸುತ್ತೇನೆ
ಈ ವಿಚಾರವಾಗಿ ನಾವು ವಿಚಾರಣೆ ಮಾಡುತ್ತೇವೆ. ಇದು ನ್ಯಾಯಾಲಯ ಹಾಗೂ ನಮ್ಮ ಆಡಳಿತ ವ್ಯವಸ್ಥೆ ಸಂಬಂಧಿಸಿದ ವಿಚಾರವಾಗಿದೆ. ವಿಚಾರಣೆ ನಡೆಸಿ ತೀರ್ಮಾನಿಸುತ್ತೇವೆ.
-ಗೌರವ್ ಗುಪ್ತಾ, ಬಿಬಿಎಂಪಿ ಮುಖ್ಯ ಆಯುಕ್ತ





