ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿ ಸಾಮರಸ್ಯ ಸಾರಿದ ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು

ಕುಲ್ಗಾಂವ್, ಜು. 12: ದಕ್ಷಿಣ ಕಾಶ್ಮೀರದ ಕುಲ್ಲಾಂವ್ ಜಿಲ್ಲೆಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತ್ ಮಹಿಳೆಯರ ಅಂತ್ಯ ಕ್ರಿಯೆ ನಡೆಸಲು ಒಗ್ಗಟ್ಟಾಗುವ ಮೂಲಕ ಕಣಿವೆಯ ಎರಡು ಸಮುದಾಯಗಳಾದ ಕಾಶ್ಮೀರಿ ಮುಸ್ಲಿಮರು ಹಾಗೂ ಕಾಶ್ಮೀರಿ ಪಂಡಿತರು ಕೋಮು ಸಾಮರಸ್ಯ ಹಾಗೂ ಭಾತೃತ್ವ ಮೆರೆದಿದ್ದಾರೆ.
ಬದ್ರಿನಾಥ್ ಅವರ ಪತ್ನಿ ಚಾಂದ್ ದೇವಿ (80) ಹಾಗೂ ಜಾನಕಿನಾಥ್ ಪತ್ನಿ ಕೌಶಲಿ ದೇವಿ (83) ಮೃತಪಟ್ಟ ಸುದ್ದಿ ಈ ಪ್ರದೇಶದಲ್ಲಿ ಹರಡಿದ ಕೂಡಲೇ ಅಂತ್ಯ ಕ್ರಿಯೆಗೆ ನೆರವು ನೀಡಲು ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಮುಂದೆ ಬಂದರು. ಈ ಇಬ್ಬರೂ ಮಹಿಳೆಯರು ಕುಲ್ಗಾಂವ್ನ ನಿವಾಸಿಗಳು. ಮೃತದೇಹಗಳನ್ನು ಸ್ಮಶಾನಕ್ಕೆ ಕೊಂಡೊಯ್ದಿರುವುದು ಅಲ್ಲದೆ, ಅಂತ್ಯಕ್ರಿಯೆಗೆ ಚಿತೆಯನ್ನು ಸಿದ್ಧಗೊಳಿಸಿರುವುದರಿಂದ ಹಿಡಿದು ಮಣ್ಣಿನ ಮಡಕೆ ಕೊಂಡೊಯ್ಯುವ ವರೆಗೆ ಎಲ್ಲ ವಿಧಿವಿಧಾನಗಳನ್ನು ಸ್ಥಳೀಯ ಮುಸ್ಲಿಮರೇ ನಿರ್ವಹಿಸಿದರು ಎಂದು ಸ್ಥಳೀಯ ನಿವಾಸಿ ಗುಲಾಮ್ ಮೊಯ್ಯುದ್ದೀನ್ ತಿಳಿಸಿದ್ದಾರೆ.
ಕಾಶ್ಮೀರಿ ಮುಸ್ಲಿಮರು ಹಾಗೂ ಪಂಡಿತರು ಒಂದೇ ನಾಣ್ಯದ ಎರಡು ಮುಖಗಳು. ಈ ಬಾಂಧವ್ಯ ಶಾಶ್ವತ ಎಂದು ಕಾಶ್ಮೀರಿ ಪಂಡಿತ್ ರಮೇಶ್ ಕುಮಾರ್ ಹೇಳಿದ್ದಾರೆ. ‘‘ಇದು ಶಾಶ್ವತ ಭಾತೃತ್ವ ಹಾಗೂ ಕೋಮು ಸಾಮರಸ್ಯ. ಇದಕ್ಕೆ ಅಂತ್ಯಕ್ರಿಯೆಗೆ ಸೇರಿದವರೇ ಸಾಕ್ಷಿ’’ ಎಂದು ಅವರು ತಿಳಿಸಿದ್ದಾರೆ. ಆದರೆ, ಮೃತದೇಹಗಳ ಅಂತ್ಯಕ್ರಿಯೆಯನ್ನು ಸಂಬಂಧಿಕರೇ ನೆರವೇರಿಸಿದರು. ಆದರೆ, ಸ್ಥಳೀಯ ಮುಸ್ಲಿಂ ಸಮುದಾಯ ಪ್ರತಿಯೊಂದು ನೆರವು ನೀಡಿತು ಎಂದು ಅನಂತರ ವರದಿಯೊಂದು ಹೇಳಿತ್ತು.







