ಸಿಡಿಲಾಘಾತ: ಉತ್ತರಪ್ರದೇಶದಲ್ಲಿ 41, ರಾಜಸ್ಥಾನದಲ್ಲಿ 19 ಮಂದಿ ಸಾವು

ಹೊಸದಿಲ್ಲಿ, ಜು. 12: ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಿಡಿಲಿನ ಆಘಾತಕ್ಕೆ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದಲ್ಲಿ 41 ಮಂದಿ ಸಾವನ್ನಪ್ಪಿದ್ದರೆ, ರಾಜಸ್ಥಾನದ ರಾಜಧಾನಿ ಜೈಪುರದ 12ನೇ ಶತಮಾನದ ಕೋಟೆಯ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ 11 ಮಂದಿ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಸಿಡಿಲಿನಿಂದ ಸಾವನ್ನಪ್ಪಿದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಪ್ರಧಾನ ಮಂತ್ರಿ ಅವರ ಕಚೇರಿ ಪರಿಹಾರ ಘೋಷಿಸಿದೆ. ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ರಾಜಸ್ಥಾನ ಹಾಗೂ ಉತ್ತರಪ್ರದೇಶ ಸರಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಸಿಡಿಲಿನ ಆಘಾತಕ್ಕೆ ಉತ್ತರಪ್ರದೇಶದಲ್ಲಿ 41 ಮಂದಿ ಮೃತಪಟ್ಟಿದ್ದಾರೆ, ಇವರಲ್ಲಿ 14 ಮಂದಿ ಪ್ರಯಾಗ್ರಾಜ್ನಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲೆ ಹೆಚ್ಚಿನ ಸಾವು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿದೆ. ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು.
‘‘ಲಭ್ಯ ಮಾಹಿತಿಯ ಪ್ರಕಾರ ಉತ್ತರಪ್ರದೇಶದ 16 ಜಿಲ್ಲೆಗಳಲ್ಲಿ ಸಿಡಿಲಿನ ಆಘಾತಕ್ಕೆ 41 ಮಂದಿ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡಲಾಗಿದೆ. ಗಾಯಗೊಂಡ ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. 250 ಪ್ರಾಣಿಗಳು ಸಾವನ್ನಪ್ಪಿವೆ, 20 ಪ್ರಾಣಿಗಳು ಗಾಯಗೊಂಡಿವೆ’’ ಎಂದು ಉತ್ತರಪ್ರದೇಶದ ಪರಿಹಾರ ಆಯುಕ್ತ ರಣವೀರ್ ಪ್ರಸಾದ್ ತಿಳಿಸಿದ್ದಾರೆ ರಾಜಸ್ಥಾನದ ಜೈಪುರದ ಸಮೀಪದ ಅಮೀರ್ ಕೋಟೆಗೆ ಭೇಟಿ ನೀಡಿದ್ದ 11 ಮಂದಿ ಸಿಡಿಲಿನ ಆಘಾತದಿಂದ ಮೃತಪಟ್ಟಿದ್ದಾರೆ. 12 ಶತಮಾನದ ಈ ಕೋಟೆಯನ್ನು ವೀಕ್ಷಿಸಿ ಸೆಲ್ಫಿ ತೆಗೆಯುತ್ತಿದ್ದಾಗ ಸಿಡಿಲು ಅಪ್ಪಳಿಸಿದೆ. ಇದಲ್ಲದೆ, ರಾಜ್ಯಾದ್ಯಂತ ಸಿಡಿಲಿನ ಆಘಾತಕ್ಕೆ 8 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 7 ಮಂದಿ ಮಕ್ಕಳು ಎಂದು ತಿಳಿದು ಬಂದಿದೆ.







