ಈ ವರ್ಷ ಜಾರ್ಖಂಡ್ ನಲ್ಲಿ ರಥ ಯಾತ್ರೆ ಇಲ್ಲ: ಮುಖ್ಯಮಂತ್ರಿ ಹೇಮಂತ್ ಸೊರೇನ್
ರಾಂಚಿ, ಜು. 12: ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ವರ್ಷ ರಥಯಾತ್ರೆ ನಡೆಸಲು ಸಾಧ್ಯವಾಗದೇ ಇರುವುದರಿಂದ ತಮ್ಮ ಮನೆಯಲ್ಲೇ ಜಗನ್ನಾಥನನ್ನು ಆರಾಧಿಸುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೋನ ಸೋಂಕು ಈಗಲೂ ಬೆದರಿಕೆಯಾಗಿರುವುದರಿಂದ ನಿರಂತರ ಎರಡನೇ ವರ್ಷವಾದ ಈ ಬಾರಿ ಕೂಡ ರಥ ಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಹೇಮಂತ್ ಸೊರೇನ್ ಹೇಳಿದ್ದಾರೆ. ‘‘ರಥ ಯಾತ್ರೆಗೆ ಅವಕಾಶ ನೀಡದಿರುವ ಬಗ್ಗೆ ನನಗೆ ನೋವು ಇದೆ. ಆದರೆ, ನಾಳೆಯನ್ನು ರಕ್ಷಿಸಲು ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೋವಿಡ್ನಿಂದಾಗಿ ಹಲವು ಉತ್ಸವಗಳ ಆಚರಣೆ ಸ್ಥಗಿತಗೊಂಡಿದೆ. ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಜಗನ್ನಾಥನ ಆಶೀರ್ವಾದ ಬೇಡುವ’’ ಎಂದು ಮುಖ್ಯಮಂತ್ರಿ ಅವರು ರವಿವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





