ಹಿಂದೂ ಕುಟುಂಬದ ಸಾಕು ತಂದೆತಾಯಿ ಬಳಿ ಏಳು ವರ್ಷವಿದ್ದು ಮರಳಿ ಹೆತ್ತವರ ಬಳಿ ಸೇರಿದ 19 ವರ್ಷದ ಅಮೀರ್

Photo: Indianexpress.com
ಮುಂಬೈ: ಸುಮಾರು ಏಳು ವರ್ಷಗಳ ತನಕ ನಾಗ್ಪುರ್ ನಲ್ಲಿ ಹಿಂದು ಸಮುದಾಯಕ್ಕೆ ಸೇರಿದ ತನ್ನ ಸಾಕು ತಂದೆತಾಯಿಯ ಜತೆಗಿದ್ದ 19 ವರ್ಷದ ಮೊಹಮ್ಮದ್ ಅಮೀರ್ ಜೂನ್ 30ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ತನ್ನ ಹೆತ್ತ ತಂದೆತಾಯಿಯನ್ನು ಸೇರಿಕೊಂಡಿದ್ದಾನೆ.
ಮಾನಸಿಕವಾಗಿ ಅಸ್ವಸ್ಥನಾಗಿರುವ ಅಮೀರ್ 2012ರಲ್ಲಿ ಜಬಲ್ಪುರದ ತನ್ನ ಹುಟ್ಟೂರಿನಿಂದ ನಾಪತ್ತೆಯಾಗಿ ಅದ್ಹೇಗೋ ನಾಗ್ಪುರ್ ರೈಲ್ವೆ ನಿಲ್ದಾಣ ತಲುಪಿದ್ದ. ಆಗ ಎಂಟು ವರ್ಷದವನಾಗಿದ್ದ ಆತನಿಗೆ ತನ್ನ ಮನೆಯೆಲ್ಲಿದೆ ಎಂದು ತಿಳಿಯದೇ ಇದ್ದುದರಿಂದ ಆತನನ್ನು ನಗರದ ಮಕ್ಕಳ ಆಶ್ರಯತಾಣಕ್ಕೆ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಸಾಮಾಜಿಕ ಕಾರ್ಯಕರ್ತ ಸಮರ್ಥ್ ದಾಮ್ಲೆ ನಡೆಸುವ ಆಶ್ರಯತಾಣಕ್ಕೆ ಆತನನ್ನು ಸ್ಥಳಾಂತರಿಸಲಾಗಿತ್ತು. ಆದರೆ ಮುಂದೆ ಅನಿವಾರ್ಯ ಕಾರಣಗಳಿಂದ ಈ ಆಶ್ರಯತಾಣ ಮುಚ್ಚಿದಾಗ ಎಲ್ಲಾ ಮಕ್ಕಳೂ ತಮ್ಮ ಹೆತ್ತವರ ಬಳಿ ತೆರಳಿದ್ದರು. ಆದರೆ ಅಮೀರ್ ಗೆ ಹೋಗಲು ಮನೆಯೇ ಇಲ್ಲದೇ ಇದ್ದುದರಿಂದ ದಾಮ್ಲೆ ಮತ್ತವರ ಪತ್ನಿ ಲಕ್ಷ್ಮಿ ಆತನನ್ನು ತಮ್ಮ ಜತೆ ಇರಿಸಲು ನಿರ್ಧರಿಸಿದ್ದರು.
ಆತನಿಗೆ ಅಮನ್ ಎಂಬ ಹೆಸರನ್ನೂ ನೀಡಲಾಗಿತ್ತು. ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಲು ಆತನಿಗೆ ಆಧಾರ್ ಕಾರ್ಡ್ ಪಡೆಯುವ ಸಲುವಾಗಿ ಕುಟುಂಬ ಇನ್ನಿಲ್ಲದ ಪ್ರಯತ್ನ ನಡೆಸಿದಾಗ ಆತ ಜಬಲ್ಪುರದಿಂದ ಕಾಣೆಯಾಗಿದ್ದ ಮೊಹಮ್ಮದ್ ಅಮೀರ್ ಎಂದು ತಿಳಿದು ಬಂದಿತ್ತು. ನಂತರ ದಾಮ್ಲೆ ಕುಟುಂಬ ಆತನ ಹೆತ್ತವರಾದ ಆಯುಬ್ ಖಾನ್ ಹಾಗೂ ಮೆಹ್ರುನ್ನೀಸಾ ದಂಪತಿಯನ್ನು ಸಂಪರ್ಕಿಸಿತ್ತು. ಹೀಗೆ ಅಮೀರ್ ಮರಳಿ ತನ್ನ ಹೆತ್ತ ತಂದೆತಾಯಿಯ ಬಳಿ ಸೇರಿದ್ದಾನೆ.
ಆದರೆ ತನ್ನ ಸಾಕುತಂದೆತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿರುವ ಅಮೀರ್ ಸೋಮವಾರ ತನ್ನ ಸಾಕುತಾಯಿ ಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಅವರ ಇತರ ಮಕ್ಕಳಾದ ಮೋಹಿತ್ (28) ಹಾಗೂ ಗುಂಜನ್ (25) ಜತೆಗೆ ನಾಗ್ಪುರ್ನಲ್ಲಿ ಆಚರಿಸಿ ಮತ್ತೆ ಜಬಲ್ಪುರಕ್ಕೆ ಮರಳಿದ್ದಾನೆ.
"ನಮ್ಮ ಮಗ ನಮಗೆ ಮತ್ತೆ ದೊರಕುವಂತಾಗಲು ಕಾರಣವಾದ ಮತ್ತು ಆತನನ್ನು ಇಷ್ಟು ವರ್ಷ ಪ್ರೀತಿಯಿಂದ ಸಲಹಿದ ದಾಮ್ಲೆ ಕುಟುಂಬಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು" ಎಂದು ಅಮೀರ್ ಹೆತ್ತ ತಂದೆ ಅಯ್ಯೂಬ್ ಖಾನ್ ಹೇಳಿದ್ದಾರೆ.







